ದಾವಣಗೆರೆ: ದಾವಣಗೆರೆಯಲ್ಲಿ ಆಯೋಜಿಸಿದ್ದ ವೀರಶೈವ ಲಿಂಗಾಯತ ಮಹಾಸಭಾ ಅಧಿವೇಶನವು ಭೀಮಣ್ಣ ಖಂಡ್ರೆ, ಶಾಮನೂರು ಶಿವಶಂಕರಪ್ಪ ಹಾಗೂ ಯಡಿಯೂರಪ್ಪ ಮೂರು ಕುಟುಂಬಗಳ ಸಮಾವೇಶ ಎಂಬುದಾಗಿ ಯತ್ನಾಳ್ ಮಾಡಿರುವ ಟೀಕೆಗೆ ಮಹಾಸಭಾದ ಜಿಲ್ಲಾ ಘಟಕ ಖಂಡಿಸಿದೆ.
ಮಹಾಸಭಾದ 24ನೇ ಮಹಾ ಅಧಿವೇಶನದಲ್ಲಿ ಇದ್ದುದು ವೀರಶೈವ ಲಿಂಗಾಯತ ಎಂಬ ಒಂದೇ ಮನೆ ಮಾತ್ರ. ಮೂರು ಕುಟುಂಬಗಳಲ್ಲ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಜೆ. ರಮೇಶ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.
ಈ ಹಿಂದಿನ ಅಧಿವೇಶನಗಳಲ್ಲಿ ಒಂದು, ಎರಡು ಕುಟುಂಬಗಳ ಸಮಾವೇಶ ಎನ್ನುತ್ತಿದ್ದ ಯತ್ನಾಳ್ ಅವರು ಇದೀಗ ಮೂರು ಕುಟುಂಬದ ಸಮಾವೇಶ ಎಂದಿದ್ದಾರೆ. ವೀರಶೈವ ಮಹಾಸಭಾ ಎಂಬುದು ಒಂದೇ ಮನೆ. ಇದರಲ್ಲಿ ಯತ್ನಾಳ್ ಅವರೂ ಸದಸ್ಯರಿದ್ದಾರೆ. ಆದರೆ ಅಧಿವೇಶನದಲ್ಲಿ ಭಾಗವಹಿಸಲಿಲ್ಲ. ಅವರ ಗೌರವಕ್ಕೆ ಇಂತಹ ಹೇಳಿಕೆ ಸಲ್ಲದು. ಅವರ ಮನಸ್ಸಿನಲ್ಲಿ ಸಮಾಜದ ಬಗ್ಗೆ ಗೌರವವಿರಲಿ ಎಂದು ಸಲಹೆ ನೀಡಿದರು.
ಮೀಸಲಾತಿ ಸಂಬಂಧದ ಹೋರಾಟಕ್ಕೆ ಮಹಾಸಭಾ ಅನೇಕ ವರ್ಷದಿಂದಲೂ ಹೋರಾಟ ನಡೆಸುತ್ತಿದೆ. ಶಾಮನೂರು ಶಿವಶಂಕರಪ್ಪನವರು ನಾವೆಲ್ಲರೂ ಒಂದು ಹೇಳುತ್ತಿದ್ದರೆ, ಯತ್ನಾಳ್ ವಿಭಜಿಸಲು ಹೊರಟಿದ್ದಾರೆ. ತಪ್ಪು ಯಾರದು ಎಂಬುದನ್ನು ಅವರೇ ವಿಮರ್ಶೆ ಮಾಡಿಕೊಳ್ಳಲಿ. 93ರ ಇಳಿವಯಸ್ಸಿನಲ್ಲೂ ಶಿವಶಂಕರಪ್ಪನವರು ಮಾಡುತ್ತಿರುವ ಕೆಲಸ, ಅಭಿಮಾನ ನೋಡಿ ಕಲಿಯಲಿ. ಮುಂದೆಯೂ ಇದೇ ಹೇಳಿಕೆ ಮುಂದುವರಿಸಿದರೆ ಸರಿ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಯತ್ನಾಳ್ ಅವರು ಅನೇಕ ಬಾರಿ ಟೀಕೆಗಳನ್ನು ಮಾಡುತ್ತಾರೆ. ಅದಕ್ಕೆ ಯಾರೂ ಪ್ರತಿಕ್ರಿಯಿಸುವುದಿಲ್ಲ. ಸೋಮವಾರ ಅವರು ಬಳಸಿದ ಪದ ಮುತ್ಸದ್ದಿಗಳು ಬಳಸುವಂಥದ್ದಲ್ಲ. ಅವರಿಗಿದು ಎಚ್ಚರಿಕೆ ಗಂಟೆ. ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಈ ಬಗ್ಗೆ ಧ್ವನಿ ಎತ್ತಲಾಗುವುದು. ಯಾರೇ ನಾಯಕರನ್ನೂ ನಿಂದಿಸುವವರ ವಿರುದ್ಧ ಪೊಲೀಸರೂ ಕೂಡ ಸುಮೋಟೋ ಮೊಕದ್ದಮೆ ದಾಖಲಿಸಬೇಕು ಎಂದೂ ಹೇಳಿದರು.
ಸ್ವಪಕ್ಷೀಯರು ಹಾಗೂ ಆಡಳಿತ ಪಕ್ಷದವರ ಮೇಲೆ ಪ್ರೀತಿ ಇಲ್ಲದ ನಿಮ್ಮಲ್ಲಿ ಸ್ವಜಾತಿ ನಾಯಕರ ಮೇಲೂ ವಿಶ್ವಾಸವಿಲ್ಲ. ನಿಮ್ಮ ಮೇಲೆ ನಿಮಗಾದರೂ ವಿಶ್ವಾಸವಿದೆಯೇ ಎಂದು ಪ್ರಶ್ನಿಸಿದ ಅವರು, ಸಮಾಜದ ಸಂಘಟನೆ, ಬಲವರ್ಧನೆಗೆ ತೊಡಗುವಂತಹ ಬುದ್ದಿಯನ್ನು ದೇವರು ನಿಮಗೆ ಕೊಡಲಿ ಎಂದು ಯತ್ನಾಳ್‌ಗೆ ತಿರುಗೇಟು ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಘಟಕದ ಕಾರ್ಯನಿರ್ವಾಹಕ ಉಮೇಶ್ ಬಣಕಾರ್, ಮಹಿಳಾ ಘಟಕದ ಅಧ್ಯಕ್ಷೆ ಶುಭಾ ಐನಳ್ಳಿ, ಪುಷ್ಪಾ ವಾಲಿ ಇದ್ದರು.
--