ಜಿಲ್ಲೆ

ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಚರ್ಚೆಯಾಗಲಿ

ಗಿರೀಶ ಸಗರ

ವಿಜಯಪುರ: ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನವು ಉತ್ತರ ಕರ್ನಾಟಕ ಜನರ ಸಮಸ್ಯೆಗಳಿಗೆ ಸ್ಪಂದಿಸಲಿ. ಹೊರತು ಕಾಟಾಚಾರಕ್ಕೆ ಅಲ್ಲಿ ಅಧಿವೇಶನ ನಡೆಸುವುದು ಬೇಡ ಎಂದು ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷ  ಅಣ್ಣಿಗೇರಿ ಒತ್ತಾಯಿಸಿದ್ದಾರೆ.

ಸಾರ್ವಜನಿಕರು ಕಟ್ಟಿದ ಕೋಟ್ಯಂತರ ರೂಪಾಯಿ ತೆರಿಗೆ ಹಣವನ್ನು ವ್ಯರ್ಥ ಮಾಡದೆ, ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳಿಗೆ ಹಣ ನೀಡಿ ತ್ವರಿತಗತಿಯಲ್ಲಿ ಪ್ರಾರಂಭಿಸಬೇಕು. ರೈತರ ಸಮಸ್ಯೆಗಳು, ವಕ್ಫ್​ ಮಾರಕ ಕಾಯ್ದೆಯಿಂದ ಸಾಕಷ್ಟು ಜನರು ಆತಂಕದಲ್ಲಿದ್ದು, ಅಂತಹ ಗಂಭೀರ ಸಮಸ್ಯೆಗಳ ಕುರಿತು ಶಾಶ್ವತ ಪರಿಹಾರ ಕಲ್ಪಿಸಲು ಅಧಿವೇಶನದಲ್ಲಿ ಚರ್ಚಿಸಿ ಯೋಜನೆ ರೂಪಿಸಬೇಕು ಎಂದು ಅವರು ಹೇಳಿದ್ದಾರೆ.

ಸಚಿವರು, ಶಾಸಕರುಗಳು ಪಾತೀತವಾಗಿ ಉತ್ತರ ಕರ್ನಾಟಕದ ಮೂಲ ಸೌಲಭ್ಯ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಅಲ್ಲದೆ, ಸರ್ಕಾರ ಸಮಸ್ಯೆಗಳಿಗೆ ಅರ್ಥಪೂರ್ಣ ಚರ್ಚೆ ನಡೆಸಿ ಅವುಗಳನ್ನು ಬಗೆಹರಿಸಬೇಕು ಎಂಬುವುದು ಅಧಿವೇಶನದ ಮುಖ್ಯ ಉದ್ದೇಶವಾಗಲಿ.

ಸಣ್ಣ ಪುಟ್ಟ ಹಾಗೂ ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟು ಅಧಿವೇಶನ ಮುಂದೂಡುವುದು, ಬಹಿಷ್ಕರಿಸುವುದು ಹಾಗೂ ಮೋಜು ಮಸ್ತಿ ಮಾಡಿ ಸಮಯ ಹಾಳು ಮಾಡದೇ, ಎಲ್ಲರೂ ಚರ್ಚೆಯಲ್ಲಿ ಭಾಗವಹಿಸಿ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಪ್ರಕಟಣೆಯ ಮೂಲಕ ರಾವ ಅಣ್ಣಿಗೇರಿ ಆಗ್ರಹಿಸಿದ್ದಾರೆ.