ಜಿಲ್ಲೆ

ಅಧಿಕಾರಿಗಳು ಜನಸಾಮಾನ್ಯರೊಂದಿಗೆ ಸ್ಪಂದಿಸುತ್ತಿಲ್ಲ

ಆಲೂರು ತಾಲೂಕಿನ ಮಿನಿ ವಿಧಾನಸೌಧಕ್ಕೆ ಜಿಲ್ಲಾಧಿಕಾರಿ ಸತ್ಯಭಾಮಾ ಶನಿವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆಲೂರು: ತಾಲೂಕಿನ ಮಿನಿ ವಿಧಾನಸೌಧಕ್ಕೆ ಜಿಲ್ಲಾಧಿಕಾರಿ ಸತ್ಯಭಾಮಾ ಶನಿವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಇದೇ ಸಂದರ್ಭದಲ್ಲಿ ಸಾರ್ವಜನಿಕರು ತಹಸೀಲ್ದಾರ್ ವರ್ಗಾವಣೆ ಆಗಿ ಹಲವು ವಾರಗಳು ಕಳೆದಿವೆ. ಸರ್ಕಾರ ಇದುವರೆವಿಗೂ ಒಬ್ಬ ತಹಸೀಲ್ದಾರ್ ಅವರನ್ನು ನೇಮಕ ಮಾಡಿಲ್ಲ. ಇದರಿಂದ ನಮ್ಮ ಕೆಲಸ ಮಾಡಿಸಿಕೊಳ್ಳಲು ದಿನನಿತ್ಯ ಕಚೇರಿಗೆ ಅಲೆಯುವಂತಾಗಿದೆ. ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ಇಲಾಖೆಯಲ್ಲಿನ ಕೆಲವು ಅಧಿಕಾರಿಗಳು ಸರಿಯಾಗಿ ಜನಸಾಮಾನ್ಯರಿಗೆ ಸ್ಪಂದಿಸುತ್ತಿಲ್ಲ. ತಕ್ಷಣ ದಕ್ಷ ತಹಸೀಲ್ದಾರ್ ಒಬ್ಬರನ್ನು ನೇಮಕ ಮಾಡಿ ವ್ಯವಸ್ಥೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು.


ಸಾರ್ವಜನಿಕರು ತಮ್ಮ ಜಮೀನಿಗೆ ಸಂಬಂಧಪಟ್ಟಂತೆ ಅಧಿಕಾರಿಗಳಿಗೆ ದಾಖಲೆಗಳನ್ನು ನೀಡಿದ್ದು ಕಚೇರಿಯಲ್ಲಿ ಸರಿಯಾಗಿ ದಾಖಲೆಗಳೇ ಇಲ್ಲವಾಗಿವೆ ಎಂದು ದೂರಿದರು. ಈ ಹಿನ್ನೆಲೆಯಲ್ಲಿ ಡಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಕೆಲವು ಕಡತಗಳನ್ನು ಪರಿಶೀಲಿಸಿದರು. ಜನಸಾಮಾನ್ಯರು ಕಚೇರಿಗೆ ಬಂದಾಗ ಗೌರವ ನೀಡಿ ಕೆಲಸ ಮಾಡಿಕೊಡಬೇಕು. ಸುಖಾಸುಮ್ಮನೆ ಕಚೇರಿಗೆ ಅಲೆಸಬಾರದು. ಸಾರ್ವಜನಿಕರಿಂದ ದೂರುಗಳು ಬರದಂತೆ ನೋಡಿಕೊಳ್ಳಿ. ದೂರುಗಳು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.


ಕಾಡಾನೆ ಸಮಸ್ಯೆ ಬಗೆಹರಿಸಿ: ರಾಷ್ಟ್ರೀಯ ಹೆದ್ದಾರಿ ಕಳಪೆ ಮತ್ತು ಮಂದಗತಿ ಕಾಮಗಾರಿ ಹಾಗೂ ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಸ್ಥಳೀಯರು ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆ ಚರ್ಚಿಸಿ ದಿನಾಂಕ ನಿಗದಿ ಮಾಡಿ ರಸ್ತೆ ಪರಿಶೀಲನೆ ನಡೆಸಲಾಗುವುದು. ರಸ್ತೆ ಅವೈಜ್ಞಾನಿಕವಾಗಿ ಕಳಪೆ ಕಾಮಗಾರಿ ಮಾಡಿರುವುದು ಕಂಡುಬಂದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು. ಕಾಡಾನೆ ಸಮಸ್ಯೆ ಬಗ್ಗೆ ಸಾರ್ವಜನಿಕರಿಂದ ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು. ಕಾಡಾನೆ ವಲಯಗಳಲ್ಲಿ ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುವ ಕೆಲಸಗಾರರಿಗೆ ಎರಡ್ಮೂರು ದಿನಗಳಲ್ಲಿ ಸಂಬಳ ನೀಡಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.


ವಿಲೇವಾರಿ ಆಗದೆ ಉಳಿದಿರುವ ಕಡತಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಬೇಕು. ನಿಮ್ಮ ಬಳಿ ಬರುವ ಸಾರ್ವಜನಿಕರಿಗೆ ಜರೂರಾಗಿ ಕೆಲಸ ಮಾಡಿಕೊಡುವಂತೆ ಅಧಿಕಾರಿಗಳ ಸಭೆ ಕರೆದು ಸೂಚಿಸುವಂತೆ ತಾತ್ಕಾಲಿಕವಾಗಿ ನಿಯೋಜನೆಗೊಂಡಿರುವ ಪ್ರಭಾರ ತಹಸೀಲ್ದಾರ್ ಮಮತಾ ಅವರಿಗೆ ಸೂಚಿಸಿದರು.


ತಹಸೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಡಿಸಿ, ಒಂದು ವಾರದೊಳಗೆ ತಹಸೀಲ್ದಾರ್ ನೇಮಕವಾಗುವ ಸಾಧ್ಯತೆ ಇದೆ. ಅಲ್ಲಿವರೆಗೂ ಸಣ್ಣಪುಟ್ಟ ಸಮಸ್ಯೆಗಳಾಗುತ್ತವೆ. ಮುಂದಿನ ಬುಧವಾರ ಆಲೂರಿಗೆ ಬೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುತ್ತೇನೆ ಎಂದರು.


ಪ್ರಭಾರ ತಹಸೀಲ್ದಾರ್ ಮಮತಾ, ಉಪ ತಹಸೀಲ್ದಾರ್ ಅಶೋಕ್ ಸೇರಿದಂತೆ ಹಲವು ಅಧಿಕಾರಿಗಳು ಸಂಘ-ಸಂಸ್ಥೆಗಳ ಮುಖಂಡರು ಹಾಜರಿದ್ದರು.