ಮೂಡಿಗೆರೆ: ಮಳೆಗಾಲದಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು, ಪಿಡಿಒಗಳು ಮತ್ತು ಸರ್ಕಾರಿ ನೌಕರರು ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ವಾಸ್ತಾವ್ಯವಿದ್ದು ಮಳೆಹಾನಿ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕಿ ನಯನಾ ಮೋಟಮ್ಮ ತಿಳಿಸಿದರು.
ಮೂಲರಹಳ್ಳಿಯಲ್ಲಿ ಮಳೆಯಿಂದ ರಸ್ತೆಯಲ್ಲಿ ಭೂಕುಸಿತವಾಗಿರುವುದನ್ನು ಗುರುವಾರ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಮಲೆನಾಡಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ವಾಸದ ಮನೆಗಳು ಕುಸಿದಿವೆ. ಹಲವೆಡೆ ವಿದ್ಯುತ್ ಲೈನಿನ ಮೇಲೆ ಮರ ಬಿದ್ದು ವಿದ್ಯುತ್ ಕಂಬಗಳು ತುಂಡಾಗಿ ಜನ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ಮಳೆಯಿಂದಾಗಿ ಬಹುತೇಕ ಹಳ್ಳಿಗಳಲ್ಲಿ ವಿದ್ಯುತ್, ಕುಡಿಯುವ ನೀರು, ರಸ್ತೆ ಸಮಸ್ಯೆ ಎದುರಾಗಿರುವ ಬಗ್ಗೆ ದೂರುಗಳಿವೆ. ಬಿದ್ದಿರುವ ಮರಗಳನ್ನು ಕೂಡಲೆ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುರಿದ ವಿದ್ಯುತ್ ಕಂಬ ತೆರವುಗೊಳಿಸಿ ತ್ವರಿತವಾಗಿ ಹೊಸ ಕಂಬ ಅಳವಡಿಸಲು ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆ ಕಡಿತಗೊಂಡು ಕುಡಿಯುವ ನೀರಿಗೆ ತೊಂದರೆ ಉಂಟಾಗುತ್ತದೆ. ಹಾಗಾಗದಂತೆ ಎಚ್ಚೆತ್ತುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಯಾವ ಭಾಗದಲ್ಲಿ ಹಾನಿಯಾದರೂ ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಮಳೆ ಹಾನಿಯ ಸಮಗ್ರ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ವಾಸದ ಮನೆ ಕುಸಿತ, ಭೂಕುಸಿತ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟದ ಬಗ್ಗೆ ಪೂರ್ಣ ಪ್ರಮಾಣದಲ್ಲಿ ನಿಗಾ ವಹಿಸಬೇಕು. ಮಳೆ ಹಾನಿ ಬಗ್ಗೆ ಎಚ್ಚರವಹಿಸಲು ತಹಸೀಲ್ದಾರ್, ತಾಪಂ ಇಒ ಇತರ ಅಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಲಾಗಿದೆ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಪಿಡಿಒ ಮತ್ತು ಕಂದಾಯ ಇಲಾಖೆ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಲಾಗಿದೆ. ಮಲೆನಾಡು ಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮಕೈಗೊಳ್ಳಲು ಮೆಸ್ಕಾಂಗೆ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸುವಂತೆ ಹಾಗೂ ವಿದ್ಯುತ್ ಕಂಬ ಮತ್ತು ತಂತಿ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ ಎಂದು ತಿಳಿಸಿದರು.
ಬಣಕಲ್ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಸುಬ್ರಹ್ಮಣ್ಯ, ಪಿಎಸ್‌ಐ ರೇಣುಕಾ, ತ್ರಿಪುರ ಪಿಡಿಒ ಎಚ್.ಎನ್.ಮಹೇಶ್, ಮಧು ಬಂಗೇರ, ಸುನೀತಾ, ಸಂಶುದ್ದೀನ್ ಇತರರಿದ್ದರು.