ಮುಂಡರಗಿ: ಕಪ್ಪತಗುಡ್ಡದ ಪವನ ವಿದ್ಯುತ್ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭದ್ರತಾ ಸಿಬ್ಬಂದಿಯನ್ನು ಮರು ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಭದ್ರತಾ ಸಿಬ್ಬಂದಿ ತಹಸೀಲ್ದಾರ್ ಕಚೇರಿ ಮುಂದೆ ನಡೆಸುತ್ತಿರುವ ಧರಣಿ ಮಂಗಳವಾರ ಎಂಟನೇ ದಿನ ಪೂರೈಸಿತು.
ಸುದ್ದಿಗಾರರೊಂದಿಗೆ ಮಾತನಾಡಿದ ಉತ್ತರ ಕರ್ನಾಟಕ ಮಹಾಸಭಾದ ಅಧ್ಯಕ್ಷ ರವಿಕಾಂತ ಅಂಗಡಿ, ‘ಕಾರ್ವಿುಕರ ಬೇಡಿಕೆ ಈಡೇರಿಸಲು ಸರ್ಕಾರಿ ಅಧಿಕಾರಿಗಳು ಹಾಗೂ ಸುಜಲಾನ್ ಕಂಪನಿಯ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಂಧಾನ ಸಭೆಗಳು ಸಂಪೂರ್ಣವಾಗಿ ವಿಫಲವಾಗಿವೆ. ಬೇಡಿಕೆ ಈಡೇರುವವರೆಗೆ ಧರಣಿ ಮುಂದುವರಿಸಲಾಗುತ್ತದೆ’ ಎಂದರು.
ಮುಂಡರಗಿ ವ್ಯಾಪ್ತಿಯ ಕಪ್ಪತಗುಡ್ಡದಲ್ಲಿ ವಿವಿಧ ಕಂಪನಿಗಳು ಸ್ಥಾಪಿಸಿರುವ ಪವನ ವಿದ್ಯುತ್ ಘಟಕಗಳು ಆಯಾ ಗ್ರಾಮ ಪಂಚಾಯಿತಿಗಳಿಗೆ ತೆರಿಗೆ ಹಣ ಪಾವತಿಸದೆ ವಂಚಿಸಿವೆ. ಈ ಕುರಿತು ತೆರಿಗೆ ಅಧಿಕಾರಿಗಳು ಕಂಪನಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಪೂರ್ವದಲ್ಲಿ ಜರುಗಿದ ಸಂಧಾನ ಸಭೆಯಲ್ಲಿ ಭದ್ರತಾ ಸಿಬ್ಬಂದಿಯ 10 ತಿಂಗಳ ಬಾಕಿ ವೇತನ ನೀಡಬೇಕು ಮತ್ತು ಅವರ ಕೆಲಸವನ್ನು ಮುಂದುವರಿಸಬೇಕು ಎಂದು ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಅಧಿಕಾರಿಗಳು ನಮ್ಮ ಮನವಿಯನ್ನು ತಿರಸ್ಕರಿಸಿದ್ದಾರೆ. ಫೆ.7ರಂದು ಹುಬ್ಬಳ್ಳಿಯಲ್ಲಿ ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಪುನಃ ಸಂಧಾನ ಸಭೆ ಜರುಗಲಿದ್ದು, ನಮ್ಮ ಬೇಡಿಕೆ ಈಡೇರದಿದ್ದರೆ ಧರಣಿ ಮುಂದುವರಿಸುತ್ತೇವೆ ಎಂದರು. ನೂರ್ಅಹ್ಮದ್ ಮಕಾಂದಾರ, ಎಸ್.ಕೆ. ನದಾಫ್, ನಿಂಗಪ್ಪ ಪೂಜಾರ, ಬಸೀರ್ ವಡ್ಡಟ್ಟಿ, ಯಂಕಪ್ಪ ಯಕ್ಲಾಸಪೂರ ಇತರರಿದ್ದರು.