ಕೊಳ್ಳೇಗಾಲ: ಚಾಮರಾಜನಗರ ಜಿಲ್ಲೆಯ ಲೋಕಾಯುಕ್ತ ಅಧಿಕಾರಿಗಳು ಪಟ್ಟಣದ ಹಳೇ ಪ್ರವಾಸಿ ಮಂದಿರದಲ್ಲಿ ಮಂಗಳವಾರ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ, ಸಾರ್ವಜನಿಕರಿಂದ 10 ದೂರು ಸ್ವೀಕರಿಸಿದರು.
ಕೆಲವರು ನಗರಸಭಾ ವ್ಯಾಪ್ತಿಯಲ್ಲಿ 2 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದು, ನಿಯಮ ಉಲ್ಲಂಘಿಸಿ ಹೆಚ್ಚುವರಿಯಾಗಿ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಇದರಿಂದ ನಗರಸಭೆಗೆ ಬರುವ ಆದಾಯಕ್ಕೆ ಕತ್ತರಿ ಬಿದ್ದಂತಾಗಿದೆ. ನಗರಸಭೆಗೆ ವಂಚನೆ ಮಾಡುವ ಇಂತಹ ವ್ಯಕ್ತಿಗಳಿಗೆ ಕಾನೂನು ಕ್ರಮ ಜರುಗಿಸಬೇಕು ಎಂದು ನಗರಸಭೆಯ ಸದಸ್ಯೆ ಜಯಮರಿ ದೂರಿದರು.
ಇದಕ್ಕೆ ಲೋಕಾಯುಕ್ತ ಇನ್ಸ್‌ಪೆಕ್ಟರ್ ಪ್ರತಿಕ್ರಿಯಿಸಿ, ಇಂತಹ ದೂರುಗಳನ್ನು ಲೋಕಾಯುಕ್ತದಲ್ಲಿ ದಾಖಲು ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಗರಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಿ. ಒಂದು ವೇಳೆ ಆ ಹಂತದಲ್ಲೂ ಆಗದಿದ್ದರೆ ನಮ್ಮ ಗಮನಕ್ಕೆ ತನ್ನಿ ಎಂದು ಸಲಹೆ ನೀಡಿದರು.
ತಮ್ಮ ಮನೆಗೆ ಇ-ಸ್ವತ್ತು ನೀಡುವಂತೆ ನಗರಸಭೆಯಿಂದ ಎಷ್ಟೇ ಕೋರಿಕೆ ಸಲ್ಲಿಸಿದರೂ ಕ್ರಮವಹಿಸುತ್ತಿಲ್ಲ ಎಂದು ಪಟ್ಟಣದ ನಿವಾಸಿ ಸಂಪತ್ ದೂರಿದರು. ಇದಕ್ಕೆ ಸ್ಥಳದಲ್ಲಿದ್ದ ನಗರಸಭಾ ಪೌರಾಯುಕ್ತ ಎಸ್.ನಂಜುಂಡಸ್ವಾಮಿ ಪ್ರತಿಕ್ರಿಯಿಸಿ, ಟೌನ್ ಪ್ಲಾನ್ ಅಪ್ರೂವಲ್ ಪಡೆಯದೆ ಮನೆ ನಿರ್ಮಿಸಿದ್ದರಿಂದ ಇ-ಸ್ವತ್ತು ನೀಡಲು ತೊಡಕಾಗಿದೆ ಎಂದು ಸಮಜಾಯಿಷಿ ನೀಡಿದರು.
ತಾಲೂಕಿನ ಶಿವನಸಮುದ್ರ ನಿವಾಸಿ ಗವಿರಾಯ ದೂರು ನೀಡಿ, ಮುಜರಾಯಿ ಇಲಾಖೆಗೆ ಸೇರಿದ ಶಿವನಸಮುದ್ರ ಸಮೂಹ ದೇವಾಲಯಗಳಾದ ಮಧ್ಯರಂಗನಾಥಸ್ವಾಮಿ, ಪ್ರಸನ್ನ ಮೀನಾಕ್ಷಿ ಸಮೇತ ಸೋಮೇಶ್ವರಸ್ವಾಮಿ ಹಾಗೂ ಆದಿಶಕ್ತಿ ಮಾರಮ್ಮನ ದೇವಸ್ಥಾನದಲ್ಲಿ 65 ವರ್ಷಕ್ಕೂ ಮೇಲ್ಪಟ್ಟವರು ಕೆಲಸ ನಿರ್ವಹಿಸುತ್ತಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ ಎಂದು ಪ್ರಶ್ನಿಸಿದರಲ್ಲದೆ, ಇವರನ್ನು ಕೆಲಸದಿಂದ ತೆಗೆದು ಯುವಕರಿಗೆ ಅವಕಾಶ ನೀಡಿ ಎಂದು ಒತ್ತಾಯಿಸಿದರು. ಈ ಬಗ್ಗೆ ಸ್ಥಳದಲ್ಲಿಯೇ ಇನ್ಸ್‌ಪೆಕ್ಟರ್ ರವಿಕುಮಾರ್ ಅವರು ಉಪವಿಭಾಗಾಧಿಕಾರಿ ಗೀತಾ ಹುಡೇದ ಅವರಿಗೆ ದೂರವಾಣಿ ಕರೆ ಮಾಡಿ ಇನ್ನೊಂದು ವಾರದಲ್ಲಿ ಈ ಬಗ್ಗೆ ಕ್ರಮವಹಿಸುವಂತೆ ಕೋರಿದರು.
ಲೋಕಾಯುಕ್ತ ಇನ್ಸ್‌ಪೆಕ್ಟರ್ ರವಿಕುಮಾರ್ ಮಾತನಾಡಿ, ಸರ್ಕಾರದ ಸುತ್ತೋಲೆಯಂತೆ ಪ್ರತಿಯೊಂದು ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ, ನಿತ್ಯ ಕರ್ತವ್ಯಕ್ಕೆ ಹಾಜರಾಗುವ ಮೊದಲು ತಮ್ಮ ಜೇಬಿನಲ್ಲಿರುವ ನಗದಿನ ಬಗ್ಗೆ ಹಾಗೂ ಕೆಲಸ ಮುಗಿಸಿ ಹೊರ ಹೋಗುವಾಗ ಎಷ್ಟು ಹಣವಿದೆ ಎಂಬುದನ್ನು ಕಡ್ಡಾಯವಾಗಿ ನಮೂದಿಸಬೇಕು. ಈ ನಡುವೆ ಪುಸ್ತಕದಲ್ಲಿ ನಮೂದಿಸಿದ ಹಣಕ್ಕಿಂತ ಹೆಚ್ಚಿನ ಪ್ರಮಾಣದ ಹಣ ಪರಿಶೀಲನೆ ವೇಳೆ ಸಿಕ್ಕಿದ್ದಲ್ಲಿ ಕಾನೂನು ಕ್ರಮಕ್ಕೊಳಗಾಬೇಕಾಗುತ್ತದೆ ಎಂದು ಎಚ್ಚರಿಸಿದರು.
ಲೋಕಾಯುಕ್ತ ಇನ್ಸ್‌ಪೆಕ್ಟರ್ ಶಶಿಕುಮಾರ್, ಸಿಬ್ಬಂದಿ ಗೌತಮ್, ಶ್ರೀನಿವಾಸ್, ಗ್ರೇಡ್-2 ತಹಸೀಲ್ದಾರ್ ಶಿವಕುಮಾರ್, ಬಿಇಒ ಚಂದ್ರಪಾಟೀಲ್, ತಾಪಂ ಕಚೇರಿ ವ್ಯವಸ್ಥಾಪಕ ಶಂಕರ್, ಸಬ್‌ರಿಜಿಸ್ಟ್ರಾರ್ ರೇಖಾ, ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್, ಉಮಾವತಿ, ಪಂಚಾಯತ್ ರಾಜ್ ಉಪವಿಭಾಗದ ಎಇಇ ಆನಂದಮೂರ್ತಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರಕಾಶ್, ಟಿಎಚ್‌ಒ ಡಾ.ಎನ್.ಗೋಪಾಲ್, ಪರಿಶಿಷ್ಟ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ನವೀನ್ ಸಿ.ಮಠದ ಇದ್ದರು.