ಜಿಲ್ಲೆ

ಅಧಿಕಾರಿಗಳು ಅಗೌರವ ತರುವ ಕೆಲಸ ಮಾಡಬೇಡಿ ಎಂದ ಪರಮೇಶ್ವರ್

ಕೊರಟಗೆರೆ:ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ, ನನಗೆ ಪರಸೆಂಟ್ ಕೊಡಿ ಎಂದು ಎಂದೂ ಕೇಳಿಲ್ಲ.... ಎಲ್ಲರನ್ನೂ ಗೌರವದಿಂದ ಕಾಣುತ್ತೇನೆ, ಯಾರೊಬ್ಬರೂ ಅಗೌರವ ತರುವ ಕೆಲಸ ಮಾಡಬೇಡಿ ಎಂದು ಅಧಿಕಾರಿಗಳಿಗೆ ಶಾಸಕ ಡಾ.ಜಿ.ಪರಮೇಶ್ವರ್ ಎಚ್ಚರಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳನ್ನು ಬಿಗಿ ಮಾಡಿಲ್ಲ. ಅಧಿಕಾರಿಗಳು ಅಂಕೆಶಂಕೆಯಿಲ್ಲದೇ ಮೆರೆಯುತ್ತಿದ್ದಾರೆ ಎಂದು ನನ್ನ ಬಗ್ಗೆ ಹಲವರು ಮಾತನಾಡುತ್ತಿದ್ದಾರೆ, ಮುಂದೆ ಯಾವುದೇ ದೂರು ಬಂದರೂ ಕ್ರಮ ಕೈಗೊಳ್ಳಲಾಗುವುದು ಎಂದರು. ಕೊರಟಗೆರೆ ತಾಲೂಕಿನಲ್ಲಿ ಕೃಷಿ ಇಲಾಖೆಯ ಮಾಹಿತಿಯಲ್ಲಿ ಸಿರಿಧಾನ್ಯ ಬೆಳೆದಿರುವ ಕುರುಹೇ ಇಲ್ಲಾ.. ಸಿರಿಧಾನ್ಯ ಬೆಳೆಯಲು ಕೃಷಿ ಅಧಿಕಾರಿಗಳು ಪ್ರೋತ್ಸಾಹಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ನಾಗರಾಜುಗೆ ಪರಮೇಶ್ವರ್ ಸೂಚಿಸಿದರು.

ತಾಪಂ ಇಒಗೆ ತರಾಟೆ: ಈ ಹಿಂದಿನ ಪ್ರಗತಿ ಪರಿಶೀಲನಾ ಸಭೆಯ ನಡಾವಳಿಗಳೇ ಇಲ್ಲ, ಸಭೆಯ ಗಂಭೀರತೆಯನ್ನೇ ತಿಳಿದಿಲ್ಲವಲ್ಲರೀ.. ಉತ್ತರ ಕೊಡ್ರೀ ಇಒ.. ಒಂದು ಕೆಡಿಪಿ ಸಭೆಯನ್ನು ಹೇಗೆ ಮಾಡಬೇಕು ಅನ್ನೋದರ ಸಾಮಾನ್ಯ ಜ್ಞಾನವೂ ಇಲ್ಲವಲ್ಲಯ್ಯ...! ಯಾಕೆ ಅನುಪಾಲನಾ ವರದಿಯನ್ನು ಪಾಲಿಸಿಲ್ಲ, ಇದು ಗಂಭೀರ ಲೋಪ ಸಭೆಯ ನಡಾವಳಿ ಪುಸ್ತಕದಲ್ಲಿ ಇದನ್ನು ನಮೂದು ಮಾಡಿ, ಇದೊಂದು ಎಚ್ಚರಿಕೆ ಎಂದು ಬರೆದುಕೊಳ್ಳಿ ಮುಂದಿನ ಸಭೆಯಲ್ಲಿ ತಪ್ಪು ನಡೆದರೆ ಶಿಸ್ತಿನ ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ಪರಮೇಶ್ವರ್ ಗುಡುಗಿದರು.

ಪಾಲಿ ಹೌಸ್ ವಿತರಣೆಯಲ್ಲಿ ಅಕ್ರಮದ ವಾಸನೆ: ಒಂದೇ ಕುಟುಂಬದ ಮೂವರಿಗೆ ಪಾಲಿಹೌಸ್ ನೀಡಲಾಗಿದೆ, ಪಾಲಿ ಹೌಸ್ ನಿರ್ಮಾಣ ಮಾಡದವರಿಗೂ ಬಿಲ್ ಪಾವತಿಸಲಾಗಿದ್ದು, ತೋಟಗಾರಿಕೆ ಇಲಾಖೆ ಅಕ್ರಮಗಳ ಬಗ್ಗೆ ಸೂಕ್ತ ತನಿಖೆ ಅಗತ್ಯವಿದೆ, ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ತೋಟಗಾರಿಕೆ ಸಹಾಯಕ ನಿರ್ದೇಶಕಿ ಪುಷ್ಪಲತಾ ಅವರನ್ನು ಪರಮೇಶ್ವರ್ ತರಾಟೆ ತೆಗೆದುಕೊಂಡರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಲ್ಲಿ?: ಪ್ರತೀ ಬಾರಿ ಎಸ್‌ಸಿ/ಎಸ್‌ಟಿ ಸಭೆ ಸೇರಿ ಯಾವುದೇ ಸಭೆಗಳಲ್ಲೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹಾಜರಾಗುವುದಿಲ್ಲ ಎನ್ನುವ ಆರೋಪವಿದೆ. ಶಾಸಕರ ನೇತೃತ್ವದಲ್ಲಿ ನಡೆಯುವ ಕೆಡಿಪಿ ಸಭೆಗೂ ಅವರು ಬಂದಿಲ್ಲ. ಅಧಿಕಾರಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ತಹಸೀಲ್ದಾರ್ ಗೋವಿಂದರಾಜುಗೆ ಪರಮೇಶ್ವರ್ ಸೂಚಿಸಿದರು.

ಅನುದಾನ ತಡೆಹಿಡಿದ ಯಡಿಯೂರಪ್ಪ: ತಾಲೂಕಿನಲ್ಲಿನ 279 ಶಾಲೆಗಳಲ್ಲಿ 132 ಪುನರ್ ನಿರ್ಮಾಣ, 70 ದುರಸ್ಥಿ ಮಾಡಿಸಲು ಸರ್ಕಾರಕ್ಕೆ ಮಾಹಿತಿ ನೀಡಿರುವುದಾಗಿ ಬಿಇಒ ಗಂಗಾಧರ್ ಮಾಹಿತಿ ನೀಡಿದಾಗ ಮಾತನಾಡಿದ ಶಾಸಕ ಪರಮೇಶ್ವರ್, ಮೈತ್ರಿ ಸರ್ಕಾರವಿದ್ದಾಗ ಶಾಲಾ ಕಟ್ಟಡಗಳ ದುರಸ್ಥಿಗಾಗಿಯೇ ಒಂದು ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದೆವು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ತಡೆದಿದ್ದಾರೆ ಎಂದರು.

ತಾಲೂಕು ಮಾತ್ರವಲ್ಲದೇ ರಾಜ್ಯದ ಬಹುತೇಕ ಶಾಲೆಗಳಲ್ಲಿ ಶೌಚಗೃಹಗಳೇ ಇಲ್ಲ. ಹೀಗಿರುವಾಗ ಬಯಲು ಮುಕ್ತವಾಗಿದ್ದೇವೆ ಎಂದು ಮೋದಿ ಹೇಗೆ ಹೇಳುತ್ತಾರೆ? ನನ್ನ ಕ್ಷೇತ್ರದಲ್ಲಿಯೇ 200ಕ್ಕೂ ಹೆಚ್ಚು ಶಾಲೆಗಳಲ್ಲಿ ಶೌಚಗೃಹಗಳು ಸರಿಯಾಗಿಲ್ಲ. ಡಾ.ಜಿ.ಪರಮೇಶ್ವರ್ ಶಾಸಕ