ತುಮಕೂರು: ಕಂದಾಯ ಶಾಖೆಯಲ್ಲಿ ದಲ್ಲಾಳಿಗಳ ಹಾವಳಿ ಹಿನ್ನೆಲೆಯಲ್ಲಿ ಪಾಲಿಕೆಯ ವಿವಿಧ ಶಾಖೆಗಳಿಗೆ ಆಯುಕ್ತ ಟಿ.ಭೂಬಾಲನ್ ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಳಗ್ಗೆ ಪಾಲಿಕೆಯ ವಿವಿಧ ಶಾಖೆಗಳಲ್ಲಿ ಹಠಾತ್ ಭೇಟಿ ನೀಡಿದ ಆಯುಕ್ತರು, ಕಂದಾಯ ಶಾಖೆಯಲ್ಲಿ ದಲ್ಲಾಳಿ (ಬ್ರೋಕರ್)ಗಳ ಹಾವಳಿ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿದ್ದರಿಂದ ಖುದ್ದು ಪರಿಶೀಲನೆ ನಡೆಸಿದರು. ಬಾಗಿಲ ಬಳಿಯೇ ನಿಂತುಕೊಂಡು ಕಂದಾಯ ಶಾಖೆಯೊಳಗಿದ್ದ ಸಾರ್ವಜನಿಕರನ್ನು ಖುದ್ದಾಗಿ ವಿಚಾರಿಸಿದರು. ಇದರಿಂದ ಅಧಿಕಾರಿಗಳು ತಬ್ಬಿಬ್ಬಾದರು.
ಸ್ವತಃ ಪರಿಶೀಲನೆ : ಕಚೇರಿಗೆ ಬಂದಿದ್ದ ಸಾರ್ವಜನಿಕರನ್ನು ಏನು ಕೆಲಸ, ಎಷ್ಟು ದಿನಗಳಿಂದ ಬರುತ್ತಿದ್ದೀರಿ? ಎಂದು ಪ್ರಶ್ನಿಸಿದರಲ್ಲದೆ, ಅವರ ಬಳಿಯಿದ್ದ ದಾಖಲಾತಿಗಳನ್ನ ಸ್ವತಃ ಪರಿಶೀಲನೆ ನಡೆಸಿದರು. ಈ ವೇಳೆ ಕಂದಾಯ ಶಾಖೆಯಲ್ಲಿ ಬ್ರೋಕರ್‌ಗಳ್ಯಾರು ಕಂಡುಬರಲಿಲ್ಲ. ಕೆಲಸಗಳು ವಿಳಂಬವಾಗುತ್ತಿದ್ದು ಹಲವು ದಿನಗಳಿಂದ ಪಾಲಿಕೆಗೆ ಅಲೆಯುತ್ತಿರುವ ಬಗ್ಗೆ ಸಾರ್ವಜನಿಕರೊಬ್ಬರು ಕಮೀಷನರ್ ಗಮನಕ್ಕೆ ತಂದಾಗ, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕೆಲಸ ಮಾಡಿಕೊಡುವಂತೆ ತಾಕೀತು ಮಾಡಿದರು. ಆಯುಕ್ತ ಭೂಬಾಲನ್ ಅವರೊಡನೆ ಕಂದಾಯ ಇಲಾಖೆ ಉಪ ಆಯುಕ್ತ ಯೋಗಾನಂದ್, ಇಇಗಳಾದ ತಿಪ್ಪೇರುದ್ರಪ್ಪ, ಆಶಾ, ಆರೋಗ್ಯಾಧಿಕಾರಿ ಡಾ.ನಾಗೇಶ್‌ಕುಮಾರ್ ಇದ್ದರು.
ಪಾಲಿಕೆ ಆವರಣದಲ್ಲಿ ಅನೈರ್ಮಲ್ಯ: ಸ್ವಚ್ಛತಾ ಸರ್ವೇಕ್ಷಣಾ ನಡೆಸುತ್ತಿರುವ ಪಾಲಿಕೆ ಆವರಣದಲ್ಲಿ ಸ್ವಚ್ಛತೆ ಇಲ್ಲದಿರುವುದನ್ನು ಕಂಡು ಆಯುಕ್ತ ಟಿ.ಭೂಬಾಲನ್ ಆಕ್ರೋಶಗೊಂಡರು. ಕಂದಾಯಶಾಖೆ ಬಳಿ ನಿರುಪಯುಕ್ತ ವಸ್ತುಗಳ ರಾಶಿ, ಎಡಿಬಿ ಕಟ್ಟಡ ಬಳಿ ಟ್ಯೂಬ್‌ಲೈಟ್ ರಾಶಿ, ನಗರಸಭೆ ಅವಧಿಯಲ್ಲಿ ಅಧ್ಯಕ್ಷರು ಬಳಸುತ್ತಿದ್ದ ಹಳೆಯ ಅಂಬಾಸಿಡರ್ ಕಾರು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಭೂಬಾಲನ್ ಏನ್ರೀ ಕಾರನ್ನು ಸಮಾಧಿ ಮಾಡಿದ್ದೀರಾ ಎಂದರು. ಕಂದಾಯ ಶಾಖೆಯ ಮೇಲ್ಭಾಗವಿರುವ ಚುನಾವಣಾ ಶಾಖೆ, ನಲ್ಮ್ ಕಚೇರಿ ಹಾಗೂ ರೆಕಾರ್ಡ್ ರೂಂಗೂ ಭೇಟಿ ನೀಡಿದ ಆಯುಕ್ತರು, ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೇಯರ್‌ಗೆ ನೋಟಿಸ್!: 2014ರ ಜೂನ್ 28 ಹಾಗೂ 2016ರ ಏಪ್ರಿಲ್ 30ರಂದು ಮಹಾನಗರ ಪಾಲಿಕೆಯ ಸಭಾನಡಾವಳಿಯನ್ನು ರದ್ದುಪಡಿಸುವ ಕುರಿತು ಮೇಯರ್‌ಗೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಕಾರಣ ಕೇಳಿ ನೊಟೀಸ್ ಜಾರಿ ಮಾಡಿರುವುದು ಕುತೂಹಲ ಕೆರಳಿಸಿದೆ. ಈ ಹಿಂದೆ ನಗರದ 7 ಕಡೆ ಹೈದರಾಬಾದ್ ಮೂಲದ ವಾಟರ್ ಹೆಲ್ತ್ ಇಂಡಿಯಾ (ಡಾ.ವಾಟರ್)ಸಂಸ್ಥೆಗೆ ಶುದ್ಧ ನೀರಿನ ಘಟಕ ಸ್ಥಾಪಿಸಲು ನಿಯಮಬಾಹಿರವಾಗಿ 15 ವರ್ಷಗಳಿಗೆ ಜಾಗ ಹಾಗೂ ನೀರನ್ನು ಉಚಿತವಾಗಿ ನೀಡಲು ಪಾಲಿಕೆ ಸಾಮಾನ್ಯಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಇದು ಸ್ಪಷ್ಟವಾಗಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಲಾಗಿದ್ದು, ನೋಟಿಸ್ ತಲುಪಿದ 15 ದಿನದಲ್ಲಿ ಉತ್ತರ ನೀಡುವಂತೆ ಸೂಚಿಸಲಾಗಿದೆ.