ಮದ್ದೂರು ತಾಲೂಕಿನ ಬೆಸಗರಹಳ್ಳಿ ಗ್ರಾಮದ ಬಸ್ ನಿಲ್ದಾಣದ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ವತಿಯಿಂದ ಆಯೋಜಿಸಿದ್ದ ಹುತಾತ್ಮ ರೈತನಾಕರಾದ ಕೆ.ಎಸ್. ಪುಟ್ಟಣ್ಣಯ್ಯ ಮತ್ತು ಕೋಣಸಾಲೆ ನರಸರಾಜು ಅವರ ಸ್ಮರಣೆ ಅಂಗವಾಗಿ ಸಾಧಕರನ್ನು ಸನ್ಮಾಸಲಾಯಿತು. ಅಣ್ಣೂರು ಮಹೇಂದ್ರ, ಕೀಳಘಟ್ಟ ನಂಜುಂಡಯ್ಯ, ವೆಂಕಟೇಶ್, ಸೊ.ಸಿ.ಪ್ರಕಾಶ, ಶಿವಲಿಂಗಯ್ಯ, ನಾರಾಯಣ, ಮಲ್ಲೇಶ ಇದ್ದರು. 
ಜಿಲ್ಲೆ

ಅಧಿಕಾರಿಗಳಿಂದ ಮನಸೋಇಚ್ಛೆ ಆಡಳಿತ

ಮದ್ದೂರು: ರೈತ ಸಂಘದ ಕಾರ್ಯಕರ್ತರು ಮತ್ತು ಪ್ರಗತಿಪರ ಚಿಂತಕರು ಒಗ್ಗೂಡದಿದ್ದರೆ ಯಾವುದೇ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಹುತಾತ್ಮರಾದ ರೈತ ನಾಯಕರ ಹೆಸರಿನಲ್ಲಿ ಸರ್ವರೂ ಒಗ್ಗಟ್ಟಾಗಬೇಕಾದ ಅಗತ್ಯತೆ ಇದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಮುಖಂಡ ಅಣ್ಣೂರು ಮಹೇಂದ್ರ ಕರೆ ನೀಡಿದರು.
ತಾಲೂಕಿನ ಬೆಸಗರಹಳ್ಳಿ ಗ್ರಾಮದ ಬಸ್ ನಿಲ್ದಾಣದ ಆವರಣದಲ್ಲಿ ಸಂಘಟನೆ ವತಿಯಿಂದ ಗುರುವಾರ ಆಯೋಜಿಸಿದ್ದ ಹುತಾತ್ಮ ರೈತನಾಯಕರಾದ ಕೆ.ಎಸ್. ಪುಟ್ಟಣ್ಣಯ್ಯ ಮತ್ತು ಕೋಣಸಾಲೆ ನರಸರಾಜು ಅವರ ಸ್ಮರಣೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆ.ಎಸ್.ಪುಟ್ಟಣ್ಣಯ್ಯ ಮತ್ತು ಕೋಣಸಾಲೆ ನರಸರಾಜ ಹುತಾತ್ಮರಾದ ನಂತರ ರೈತ ಸಂಘಟನೆಯ ಬಲ ಕುಸಿಯುತ್ತಿದೆ. ಮನಸ್ತಾಪಗಳನ್ನು ಬಿಟ್ಟು ಚಳವಳಿಗಾರರು ಒಂದಾದರೆ ಕಠಿಣ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎಂದರು.
ಸರ್ಕಾರಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಸಂಘಟನೆಗಳೆಂದರೆ ಭಯ ಇಲ್ಲ. ಮನಸೋ ಇಚ್ಛೆ ಆಡಳಿತ ಮಾಡುವ ಮೂಲಕ ರೈತ ಸಂಕುಲಕ್ಕೆ ಗಾಯದ ಮೇಲೆ ಬರೆ ಎಳೆಯುತ್ತಿದ್ದಾರೆ. ರೈತನ ಬದುಕು ದಿನದಿಂದ ದಿನಕ್ಕೆ ಹೀನಾಯ ಸ್ಥಿತಿ ತಲುಪುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ರೈತರು ಹೈರಾಣಾಗುತ್ತಿದ್ದಾರೆ. ರೈತರ ಸಮಸ್ಯೆಗಳು ಬಗೆಹರಿಯ ಬೇಕಾದರೆ ನಾವು ಸಿದ್ಧಾಂತ ಮತ್ತು ಬದ್ಧತೆಯಿಂದ ಹೋರಾಟ ಮಾಡಬೇಕಾದದ್ದು ಅನಿವಾರ್ಯ ಎಂದರು.
ರೈತ ಸಂಘದ ಹಿರಿಯ ಮುಖಂಡ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ಹುತಾತ್ಮರಾಗಿರುವ ಕೆ.ಎಸ್. ಪುಟ್ಟಣ್ಣಯ್ಯ, ಕೋಣಸಾಲೆ ನರಸರಾಜು, ವಳಗೆರೆಹಳ್ಳಿ ಅಶೋಕ್ ಅವರ ಸಂಘಟನಾ ಕೌಶಲಗಳನ್ನು ಯುವ ಹೋರಾಟಗಾರರು ಅಳವಡಿಸಿಕೊಳ್ಳಬೇಕು ಎಂದರು.
ರೈತ ಸಂಘದ ಹಿರಿಯ ಹೋರಾಟಗಾರರನ್ನು ಅಭಿನಂದಿಸಲಾಯಿತು. ಕೆ.ಎಸ್. ಪುಟ್ಟಣ್ಣಯ್ಯ ಕೋಣಸಾಲೆ ನರಸರಾಜು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು ರೈತ ಸಂಘದ ನಾಮಫಲಕಕ್ಕೆ ಪೂಜೆ ಸಲ್ಲಿಸಲಾಯಿತು.

ರೈತ ಸಂಘದ ಮುಖಂಡರಾದ ಪಣ್ಣೆದೊಡ್ಡಿ ವೆಂಕಟೇಶ, ರಮೇಶ, ಸೊ.ಸಿ. ಪ್ರಕಾಶ, ಗುಡಿ ದೊಡ್ಡಿ ಶಿವಲಿಂಗಯ್ಯ, ನಾರಾಯಣ್, ಬೊಪ್ಪಸಮುದ್ರ ಮಲ್ಲೇಶ, ಹೊಸಹಳ್ಳಿ ಸಿದ್ದರಾಜು, ವಿಜಿಕುಮಾರ್, ಮಡೇನಹಳ್ಳಿ ಮುತ್ತುರಾಜು, ಕರಡಕೆರೆ ಶಿವು, ರಾಮಣ್ಣ, ಡಿಎ ಕೆರೆ ಚನ್ನಪ್ಪ, ಡಿಎಎಸ್ ಮುಖಂಡ ಬಿ.ಎಂ. ಸತ್ಯ, ಧೀರ್ ಕುಮಾರ್, ಪ್ರಭುಲಿಂಗ, ಮರಲಿಂಗ, ಅರಗಿನಮೇಳೆ ರಾಮೇಗೌಡ, ಹುರುಗಲವಾಡಿ ಉಮೇಶ ಇದ್ದರು.