ನಾಪೋಕ್ಲು: ಸಮಾಜ ಹಾಗೂ ಗ್ರಾಮಗಳ ಅಭಿವೃದ್ಧಿ ಅಧಿಕಾರಿಗಳು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಸಾಧ್ಯ ಎಂದು ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಕಾನ್ಸಿರಾಂಜೀ ನಗರದ ಸ್ಥಾಪಕಾಧ್ಯಕ್ಷ ಕೆ.ಮೊಣ್ಣಪ್ಪ ಅಭಿಪ್ರಾಯಪಟ್ಟರು.
ಉತ್ತಮ ಕರ್ತವ್ಯ ನಿರ್ವಹಿಸುತ್ತಿರುವ ದಕ್ಷ ಅಧಿಕಾರಿ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ನಿರ್ದೇಶಕ ಶೇಖರ್ ಅವರನ್ನು ಮಂಗಳವಾರ ಹೊದ್ದೂರು ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳು, ಸದಸ್ಯರು ಮತ್ತು ಕಾನ್ಸಿರಾಂಜೀ ನಗರದ ಪಾಲೆಮಾಡುವಿನ ನಿವಾಸಿಗಳ ಪರವಾಗಿ ಸನ್ಮಾನಿಸಿ ಅವರು ಮಾತನಾಡಿದರು.
ಸರ್ಕಾರಿ ಹುದ್ದೆಯಲ್ಲಿರುವ ಶೇ.75ರಷ್ಟು ಅಧಿಕಾರಿಗಳು ನಾಮ್ ಕೇ ವಾಸ್ತೆಗೆ ಕೆಲಸ ಮಾಡುತ್ತಾ ದರ್ಪ ಮತ್ತು ಬೇಜವಾಬ್ದಾರಿತನ ರೂಢಿಸಿಕೊಂಡಿದ್ದಾರೆ. ಅಂತಹ ಅಧಿಕಾರಿಗಳಿಗೆ ಸಮಾಜ ಸೂಕ್ಷ್ಮವಾಗಿ ನೋಡುತ್ತಿದೆ ಎಂಬ ಅರಿವು ಮೂಡಿಸಬೇಕು. ಅವರಲ್ಲಿ ಬೆರಳೆಣಿಕೆಯಷ್ಟು ಶೇಖರ್ ಅವರಂತ ಅಧಿಕಾರಿಗಳು ಇರಲು ಸಾಧ್ಯ. ಆದ್ದರಿಂದ ನಿಷ್ಠಾವಂತ ಅಧಿಕಾರಿಗಳಿಗೆ ಸನ್ಮಾನಿಸುವ ಮೂಲಕ ಅಧಿಕಾರಿಗಳ ಜವಾಬ್ದಾರಿ ಮತ್ತು ಕರ್ತವ್ಯವನ್ನು ಹೆಚ್ಚಿಸಿ ಪ್ರಜ್ಞಾವಂತ ಸಮಾಜಕ್ಕೆ ಮತ್ತು ಅಧಿಕಾರಿಗಳಿಗೆ ತಿಳಿಯಪಡಿಸುವ ಅಗತ್ಯವಿದೆ ಎಂದರು.
ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎ.ಹಂಸ ಮಾತನಾಡಿ, ಹೊದ್ದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳಲ್ಲಿ ಮತ್ತು ಪಾಲೆಮಾಡುವಿನ ವಿಷಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಮೊದಲ ಸರ್ಕಾರಿ ಬಸ್ಸು, ಹಕ್ಕುಪತ್ರವನ್ನು ನೀಡಿರುವುದು, ನೂತನ ಕಾಂಕ್ರೀಟ್ ರಸ್ತೆಗಳು, ಹೀಗೆ ಅಭಿವೃದ್ಧಿ ಕಾರ್ಯಗಳಲ್ಲಿ ಶೇಖರ್ ಅವರು ಕರ್ತವ್ಯನಿಷ್ಠೆ ಮೆರೆದಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ನಿರ್ದೇಶಕ ಶೇಖರ್, ಅಧಿಕಾರಿಗಳು ಉತ್ತಮ ಕರ್ತವ್ಯಗಳನ್ನು ನಿರ್ವಹಿಸಲು ಶಾಸಕ ಡಾ.ಮಂತರ್ ಗೌಡ ಅವರು ಮುಕ್ತವಾದ ಸ್ವಾತಂತ್ರೃ ನೀಡಿದ್ದಾರೆ. ಹೊದ್ದೂರು ಗ್ರಾಮ ಪಂಚಾಯಿತಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ವಿನೂತನವಾಗಿ ಅನುಷ್ಠಾನಕ್ಕೆ ತರುತ್ತದೆ. ಜಿಲ್ಲೆಯ ಎಲ್ಲ ಪಂಚಾಯಿತಿಗಳೂ ಬೆಳೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಬಿ ಹಮೀದ್, ಕುಸುಮಾವತಿ ಆನಂದ್, ನರೇಗಾ ಯೋಜನೆಯ ತಾಲೂಕು ಸಹ ನಿರ್ದೇಶಕರಾದ ಹೇಮಂತ್, ಹೊದ್ದೂರು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಎ.ಎ.ಅಬ್ದುಲಾ, ಇಲಾಖೆಯ ಸಿಬ್ಬಂದಿ, ಕಾನ್ಸಿರಾಂಜಿ ನಗರ ಪಾಲೆಮಾಡುವಿನ ನಿವಾಸಿಗಳು ಹಾಜರಿದ್ದರು.