ಹನೂರಿನಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜಯಂತಿಯನ್ನು ಗುರುವಾರ ಆಚರಿಸಲಾಯಿತು ಗಿರೀಶ್, ಹರೀಶ್‌ಕುಮಾರ್, ಸುದೇಶ್, ನಾಗೇಂದ್ರ, ಮಹದೇವಸ್ವಾಮಿ ಇತರರು ಇದ್ದರು.  
ಜಿಲ್ಲೆ

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪಪಂ ಉಪಾಧ್ಯಕ್ಷ

ಹನೂರು: ಪಟ್ಟಣದ ಲೋಕೋಪಯೋಗಿ ಇಲಾಖೆ ಅತಿಥಿಗೃಹದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕುವೆಂಪು ಜಯಂತಿ ಕಾರ್ಯಕ್ರಮ ತಡವಾದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಯಂತಿ ಅಚರಣೆಯನ್ನು ಬೆಳಗ್ಗೆ 10.30ಕ್ಕೆ ನಿಗದಿಗೊಳಿಸಿದ್ದು, ಪಪಂ ಜನಪ್ರತಿನಿಧಿಗಳು ಹಾಗೂ ಸಮುದಾಯದ ಮುಖಂಡರನ್ನು ಆಹ್ವಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಎಲ್ಲರೂ ಸಮಯಕ್ಕೆ ಸರಿಯಾಗಿ ಆಗಮಿಸಿದ್ದರು. ಕಾರ್ಯಕ್ರಮವು ತಹಸೀಲ್ದಾರ್ ಆನಂದಯ್ಯ ಅಧ್ಯಕ್ಷತೆಯಲ್ಲಿ ನಡೆಯಬೇಕಿತ್ತು. ಆದರೆ ಅವರು ಜಿಲ್ಲಾಧಿಕಾರಿ ಸಭೆಯಲ್ಲಿ ಭಾಗವಹಿಸಿದ್ದ ಕಾರಣ ಜವಾಬ್ದಾರಿಯನ್ನು ಗ್ರೇಡ್-2 ತಹಸೀಲ್ದಾರ್ ಧನಂಜಯ ಅವರಿಗೆ ವಹಿಸಲಾಗಿತ್ತು. ಆದರೆ ಅವರು ಬೆಳಗ್ಗೆ 11.15 ಗಂಟೆಯಾದರೂ ಆಗಮಿಸದ ಹಿನ್ನೆಲೆ ಕಾದು ಕುಳಿತ್ತಿದ್ದ ಮುಖಂಡರು ಹಾಗೂ ಪಪಂ ಜನಪ್ರತಿನಿಧಿಗಳು ಅವರ ನಡೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಪಪಂ ಉಪಾಧ್ಯಕ್ಷ ಗಿರೀಶ್ ಮಾತನಾಡಿ, ನಿಗದಿಗೊಳಿಸಿದ್ದ ಸಮಯಕ್ಕೆ ಸರಿಯಾಗಿ ಕುವೆಂಪು ಜಯಂತಿ ಕಾರ್ಯಕ್ರಮವನ್ನು ಆರಂಭಿಸಬೇಕಿತ್ತು. ಅಧಿಕಾರಿಗಳು ಹಾಜರಿರಬೇಕಿತ್ತು. ಕಾಟಾಚಾರಕ್ಕಾಗಿ ಜಯಂತಿ ಆಚರಣೆ ಮಾಡಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸರಿ? ನಮಗೆ ಕೆಲಸವಿಲ್ಲದೆ ಕಾರ್ಯಕ್ರಮಕ್ಕೆ ಬಂದಿದ್ದೀವಾ? ಎಂದು ಶಿರಸ್ತೇದಾರ್ ನಾಗೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಕಾರ್ಯಕ್ರಮ ಆರಂಭಿಸಲಾಯಿತು.

ಪಪಂ ಸದಸ್ಯ ಹರೀಶ್‌ಕುಮಾರ್ ಮಾತನಾಡಿ, ಕನ್ನಡ ಸಾಹಿತ್ಯ ಲೋಕಕ್ಕೆ ಕುವೆಂಪು ಅವರ ಕೊಡುಗೆ ಅಪಾರವಾಗಿದ್ದು, ನಾಡಗೀತೆಯನ್ನು ಸಮರ್ಪಿಸಿದ್ದಾರೆ. ಮಾನವೀಯ ಮೌಲ್ಯವನ್ನು ಹೊಂದಿದ್ದ ಅವರು ಜನಮಾನಸದಲ್ಲಿ ಇಂದಿಗೂ ಅಜರಾಮರರು. ಆದ್ದರಿಂದ ಪ್ರತಿಯೊಬ್ಬರೂ ಕುವೆಂಪು ಕೃತಿಗಳನ್ನು ಓದುವುದರ ಮೂಲಕ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಪಪಂ ಸದಸ್ಯ ಸುದೇಶ್, ಆರ್‌ಐ ಮಹದೇವಸ್ವಾಮಿ, ಗ್ರಾಮ ಲೆಕ್ಕಿಗ ಶೇಷಣ್ಣ, ಲೋಕೇಶ್, ಮುಖಂಡರಾದ ನಟರಾಜು, ಸಿದ್ದೇಗೌಡ ಹಾಗೂ ಕಂದಾಯ ಇಲಾಖೆ ನೌಕರರು ಇದ್ದರು.