ಚಿತ್ರದುರ್ಗ: ಬೆಂಗಳೂರಿನ ಬೊಮ್ಮನಹಳ್ಳಿ ಉಪವಲಯ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಚಿರತೆ ಸೆರೆಹಿಡಿಯುವ ನೆಪದಲ್ಲಿ ಕೊಂದಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಅರಣ್ಯ ಇಲಾಖೆ ಮುಂಭಾಗ ಕೆಲಕಾಲ ಪ್ರತಿಭಟನೆ ನಡೆಸಿ, ಧಿಕ್ಕಾರ ಕೂಗಿದರು. ಹುಲಿ ಉಗುರು ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ವನ್ಯಜೀವಿಗಳ ಸಂರಕ್ಷಣೆಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಒತ್ತಾಯಿಸಿ ಅರಣ್ಯ ಇಲಾಖೆ ಮೂಲಕ ಮನವಿ ರವಾನಿಸಿದರು.
ಕಳೆದ ಮೂರ‌್ನಾಲ್ಕು ದಿನಗಳಿಂದ ರಾತ್ರಿ ವೇಳೆ ಕಾಣಿಸಿಕೊಳ್ಳುತ್ತಿದ್ದ ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆಹಿಡಿಯುವುದಾಗಿ ಹೇಳಿದ್ದ ಅರಣ್ಯ, ಪೊಲೀಸ್ ಇಲಾಖೆ ಅಧಿಕಾರಿಗಳು ಕೊಂದಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ರಾಷ್ಟ್ರದೊಳಗೆ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದು, ಅರಣ್ಯ ಇಲಾಖೆಯಲ್ಲಿ ಸುರಕ್ಷತಾ ಪರಿಕರಗಳಿದ್ದರೂ ಚಿರತೆ ಬಲಿ ಪಡೆದಿರುವುದು ಖಂಡನೀಯ. ಆ ಅಧಿಕಾರಿಗಳು, ಸಿಬ್ಬಂದಿಯನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಿ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ಸಂಘಟನೆ ಜಿಲ್ಲಾ ಅಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾ ಜಿಲ್ಲಾ ಅಧ್ಯಕ್ಷೆ ವೀಣಾ ಗೌರಣ್ಣ, ಪದಾಧಿಕಾರಿಗಳಾದ ರತ್ನಮ್ಮ, ಜಗದೀಶ್, ವಿಶ್ವನಾರಾಯಣಮೂರ್ತಿ, ಹರೀಶ್, ಅಖಿಲೇಶ್, ಗೋಪಿನಾಥ್, ಪ್ರದೀಪ್, ಅವಿನಾಶ್ ಇತರರಿದ್ದರು.