ದೊಡ್ಡಬಳ್ಳಾಪುರ: ಪ್ರಾಮಾಣಿಕವಾಗಿ ಕೆಲಸ ಮಾಡದೆ ನಗರಸಭೆಯನ್ನು ಭ್ರಷ್ಟಾಚಾರದ ಕೂಪ ಮಾಡಿರುವ ಐದು ವರ್ಷಕ್ಕಿಂತ ಹೆಚ್ಚುಕಾಲದಿಂದ ಇರುವ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು.
ನಗರಸಭೆಯಲ್ಲಿ ಗುರುವಾರ ಏರ್ಪಡಿಸಿದ್ದ ಮೊದಲ ಸಾಮಾನ್ಯ ಸಭೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಸದಸ್ಯರ ಪ್ರತಿಭಟನೆಯೊಂದಿಗೆ ಆರಂಭವಾಯಿತು.
ಎರಡೂವರೆ ವರ್ಷ ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳು ಇರಲಿಲ್ಲ. ಆ ಸಂದರ್ಭದಲ್ಲಿ ಸಣ್ಣಪುಟ್ಟ ಕೆಲಸಗಳನ್ನೂ ಮಾಡದೆ ನಿರ್ಲಕ್ಷ್ಯ ತೋರಲಾಗಿದೆ. ಜತೆಗೆ ಏನೇ ಕೆಲಸ ಆಗಬೇಕಾದರೂ ಲಂಚ ಕೊಡಲೇ ಬೇಕು ಎಂಬು ಅಲಿಖಿತ ನಿಯಮ ಜಾರಿಯಲ್ಲಿತ್ತು. ಇದರಿಂದಾಗಿ ನಗರಸಭೆ ಎಂಬುದು ಭ್ರಷ್ಟಾಚಾರದ ಕೂಪವಾಗಿ ಮಾರ್ಪಟ್ಟಿದೆ. ಆದ್ದರಿಂದ, ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡುವಂತೆ ಶಾಸಕ ವೆಂಕಟರಮಣಯ್ಯ ಮತ್ತು ಪೌರಾಯುಕ್ತ ರಮೇಶ ಸುಣಗಾರ ಅವರನ್ನು ಸದಸ್ಯರು ಒಕ್ಕೂರಲಿಂದ ಆಗ್ರಹಿಸಿದರು.
ಕಂದಾಯಕ್ಕೆ ಏಕಗವಾಕ್ಷಿ ಪದ್ಧತಿ: ನಗರಸಭೆ ಪ್ರಮುಖ ಆದಾಯ ಮೂಲ ಎನಿಸಿರುವ ಮನೆ ಕಂದಾಯ, ನೀರಿನ ತೆರಿಗೆ, ಯುಜಿಡಿ, ವಾಣಿಜ್ಯ ಕಟ್ಟಡಗಳ ತೆರಿಗೆ, ವ್ಯಾಪಾರ ತೆರಿಗೆ ಸಂಗ್ರಹಕ್ಕೆ ಏಕಗವಾಕ್ಷಿ ಪದ್ಧತಿ ಜಾರಿಗೊಳಿಸಬೇಕು. ಇದರಿಂದ ಕಂದಾಯ ಪಾವತಿಗಾಗಿ ಜನರು ನಗರಸಭೆಗೆ ಬಂದಾಗ ಒಂದೇ ಸೂರಿನಡಿ ಎಲ್ಲ ತೆರಿಗೆಗಳನ್ನು ಪಾವತಿಸಲು ಅನುಕೂಲವಾಗುತ್ತದೆ ಎಂದು ಸದಸ್ಯ ತ.ನ. ಪ್ರಭುದೇವ ಒತ್ತಾಯಿದರು.
ಪ್ಲಾಸ್ಟಿಕ್, ತ್ಯಾಜ್ಯ ಸಮರ್ಪಕವಾಗಿ ನಿರ್ವಹಿಸಿ: ಸರ್ಕಾರ, ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದೆ. ಆದರೂ ನಗರದ ಪ್ರತಿಯೊಂದು ಅಂಗಡಿಗಳಲ್ಲೂ ಪ್ಲಾಸ್ಟಿಕ್ ಬ್ಯಾಗ್ ಬಳಕೆ ಮಾಡಲಾಗುತ್ತಿದೆ. ಇದರಿಂದ ನಗರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ಹೆಚ್ಚಾಗುತ್ತಿದೆ. ಆಸ್ಪತ್ರೆಗಳು ವೈದ್ಯಕೀಯ ತ್ಯಾಜ್ಯವನ್ನು ಸ್ವತಃ ಸಂಸ್ಕರಿಸದೆ, ಕೆರೆಗಳ ಅಂಗಳದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಅಂಥ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಂ. ಶ್ರೀನಿವಾಸ್ ಮತ್ತು ಮಲ್ಲೇಶ್ ಆಗ್ರಹಿಸಿದರು.
ಮುಖ್ಯರಸ್ತೆ ದುರಸ್ತಿಗೊಳಿಸಿ: ನಗರದ ಭುವನೇಶ್ವರಿ ನಗರದ ಬಳಿ ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಕೆಆರ್‌ಡಿಸಿಎಲ್ ವಾರ್ಡ್‌ನ ಮುಖ್ಯರಸ್ತೆಯನ್ನು ಬಳಸಿಕೊಂಡಿತ್ತು. ಇದರಿಂದಾಗಿ ರಸ್ತೆ ಸಂಪೂರ್ಣ ಹಾಳಾಗಿದೆ. ಹೆದ್ದಾರಿ ಕಾಮಗಾರಿ ಮುಗಿದರೂ ಈ ರಸ್ತೆಯನ್ನು ದುರಸ್ತಿಗೊಳಿಸಲು ಕೆಆರ್‌ಡಿಸಿಎಲ್ ಮುಂದಾಗಿಲ್ಲ. ಆದ್ದರಿಂದ, ನಗರಸಭೆಯಿಂದ ರಸ್ತೆ ದುರಸ್ತಿಗೊಳಿಸುವಂತೆ ವೆಂಕಟೇಶ್ ಮನವಿ ಮಾಡಿದರು.
ಮೇಲ್ಸೇತುವೆ ನಿರ್ಮಿಸಿ: ನಗರದ ರೈಲ್ವೆ ನಿಲ್ದಾಣದ ಬಳಿ ಮೇಲ್ಸೇತುವೆ ನಿರ್ಮಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ನಗರಸಭೆಯ ಒಳಚರಂಡಿ ನೀರು ದೊಡ್ಡ ತುಮಕೂರು ಕೆರೆ ಸೇರುತ್ತಿದೆ. ಇದನ್ನು ಸಂಸ್ಕರಿಸಿ, ಕೆರೆಗೆ ಹರಿಸುವ ವ್ಯವಸ್ಥೆ ಮಾಡುವಂತೆ ಪೌರಾಯುಕ್ತರಿಗೆ ಶಾಸಕ ವೆಂಕಟರಮಣಯ್ಯ ಸೂಚಿಸಿದರು.
ಶಾಸಕರನ್ನು ಆಹ್ವಾನಿಸದ್ದಕ್ಕೆ ಆಕ್ರೋಶ: ಶಿಷ್ಟಾಚಾರದ ಪ್ರಕಾರ ಶಾಸಕ ವೆಂಕಟರಮಣಯ್ಯ ಅವರನ್ನು ನಗರಸಭೆಯ ಸಾಮಾನ್ಯ ಸಭೆಗೆ ಆಹ್ವಾನಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ಪೌರಾಯುಕ್ತ ರಮೇಶ ಎಸ್ ಸುಣಗಾರ್ ವಿರುದ್ಧ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರ ಕ್ಷಮೆಯಾಚಿಸಿದ ಪೌರಾಯುಕ್ತರು, ಸಭೆ ಆರಂಭಿಸಿದರು.