ಜಿಲ್ಲೆ

ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆ

ಆಲೂರು: ಲಕ್ಷಾಂತರ ರೂ. ಖರ್ಚು ಮಾಡಿ ಆಲೂರು ಪಟ್ಟಣದಲ್ಲಿ ತೆರೆದಿದ್ದ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳು ಪಟ್ಟಣ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಉಪಯೋಗಕ್ಕೆ ಬಾರದಂತಾಗಿದ್ದು, ತುಕ್ಕು ಹಿಡಿಯುತ್ತಿವೆ ಎಂದು ಆರೋಪಿಸಿ ಪಟ್ಟಣದ ನಿವಾಸಿಗಳು ಪ್ರತಿಭಟನೆ ನಡೆಸಿದರು.


ಆಲೂರು ಪಟ್ಟಣದ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಆರೇಳು ವರ್ಷಗಳ ಹಿಂದೆ ಸರ್ಕಾರ ತಲಾ 10 ಲಕ್ಷ ರೂ. ವೆಚ್ಚದಲ್ಲಿ ಎರಡು ಶುದ್ಧ ನೀರಿನ ಘಟಕಗಳನ್ನು ತೆರೆದಿದೆ. ಆದರೆ ಇದುವರೆವಿಗೂ ಈ ಘಟಕಗಳು ಒಂದು ದಿನವೂ ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಅಲ್ಲಿನ ಯಂತ್ರೋಪಕರಣಗಳು ತುಕ್ಕು ಹಿಡಿಯುತ್ತಿವೆ. ಅದರೆ ಅವುಗಳ ದುರಸ್ತಿ ಹೆಸರಿನಲ್ಲಿ ಅಧಿಕಾರಿಗಳು ಜನರ ತೆರಿಗೆ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ, ಪಟ್ಟಣ ಪಂಚಾಯಿತಿ ನಾಮನಿರ್ದೇಶಕ ರವಿಕುಮಾರ್, ನಾಗರಾಜ್, ಡಾ.ಜಯರಾಜ್, ಧನಂಜಯ, ಹರೀಶ್, ನಿವೃತ್ತ ಶಿಕ್ಷಕ ಮಂಜುನಾಥ್ ಇತರರು ಹಾಜರಿದ್ದರು.