ಜಿಲ್ಲೆ

ಅಧಿಕಾರಿಗಳ ನಿರ್ಲಕ್ಷೃದಿಂದ ಸಂಕಷ್ಟಕ್ಕೆ ಸಿಲುಕಿದ ರೈತರು

ಗುಂಡ್ಲುಪೇಟೆ: ಅಧಿಕಾರಿಗಳ ನಿರ್ಲಕ್ಷೃದಿಂದ ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಮಾರಾಟ ಮಾಡಿದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಅರಿಶಿಣ ಬೆಳೆಗಾರರ ಒಕ್ಕೂಟದ ಸಂಚಾಲಕ ಎಸ್.ಎಂ.ನಾಗಾರ್ಜುನಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸಿದ ಸೂರ್ಯಕಾಂತಿ ಮಾರಾಟ ಮಾಡಿದ ರೈತರ ಖಾತೆಗೆ ಹಣ ಪಾವತಿಸುವಂತೆ ಒತ್ತಾಯಿಸಿ ಬುಧವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಅರಿಶಿಣ ಬೆಳೆಗಾರರ ಒಕ್ಕೂಟ ಆರಂಭಿಸಿದ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಬೆಲೆ ನಷ್ಟದಿಂದ ತೊಂದರೆಗೊಳಗಾದ ರೈತರಿಗೆ ಸರ್ಕಾರವು ಬೆಂಬಲ ನೀಡುವ ಮೂಲಕ ನೆರವಿಗೆ ಮುಂದಾದರೂ ಐಎಎಸ್ ಅಧಿಕಾರಿಗಳು ಯೋಜನೆಯನ್ನು ವಿಫಲಗೊಳಿಸಲು ಸಂಚು ನಡೆಸಿದ್ದಾರೆ. ಈಗಾಗಲೇ ಉತ್ತರ ಕರ್ನಾಟಕದಲ್ಲಿ ಕುಸುಬೆ ಖರೀದಿಸಿದ ಹಣವನ್ನು ಇನ್ನೂ ನೀಡದೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಇವರನ್ನು ಪ್ರಶ್ನಿಸಬೇಕಾದ ಜನಪ್ರತಿನಿಧಿಗಳು ಕೂಡ ರೈತರ ಹಿತ ಕಾಪಾಡಲು ಮುಂದಾಗಿಲ್ಲ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರಾಜ್ಯ ಸರ್ಕಾರ ಕಳೆದ ಅಕ್ಟೋಬರ್ 2 ರಿಂದ ಪಟ್ಟಣ ಹಾಗೂ ತೆರಕಣಾಂಬಿಯ ಎಪಿಎಂಸಿ ಆವರಣದಲ್ಲಿ ಖರೀದಿ ಕೇಂದ್ರ ಆರಂಭಿಸಿ ಸೂರ್ಯಕಾಂತಿ ಖರಿದಿಸಿದೆ. ಕೇಂದ್ರ ಸರ್ಕಾರದ ಎಂಎಸ್‌ಪಿ ಕಾಯ್ದೆ ಪ್ರಕಾರ ರೈತರಿಂದ ಬೆಳೆ ಖರೀದಿಸಿದ 3 ದಿನಗಳ ಒಳಗಾಗಿ ಅವರ ಖಾತೆಗೆ ಹಣ ಜಮೆ ಮಾಡಬೇಕಾಗಿದೆ. 25 ದಿನಗಳಾದರೂ ಖರೀದಿಸಿದ ಉತ್ಪನ್ನಗಳಿಗೆ ಹಣ ಸಂದಾಯ ಮಾಡಲು ಕೃಷಿ ಮಾರಾಟ ಮಂಡಳಿ ಆವರ್ತ ನಿಧಿ ಮೀಸಲಿಡದೆ ನಿರ್ಲಕ್ಷೃ ಮಾಡಿದ್ದರಿಂದ ಇನ್ನು ರೈತರಿಗೆ ಹಣ ಪಾವತಿಯಾಗಿಲ್ಲ. ಆದ್ದರಿಂದ ಕೃಷಿ ಮಾರಾಟ ಮಂಡಳಿಯೂ ಆವರ್ತ ನಿಧಿಯನ್ನು ಬಿಡುಗಡೆ ಮಾಡಿ ರೈತರ ಖಾತೆಗೆ ಹಣ ಜಮೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭ ಮುಖಂಡ ಕುಂದಕೆರೆ ಸಂಪತ್ತು. ನಾಗಪ್ಪ, ಮಂಜಪ್ಪ ಇತರರು ಇದ್ದರು.