ಜಿಲ್ಲೆ

ಅಧಿಕಾರಿಗಳ ಗೈರಿಗೆ ಶಾಸಕರ ಕಿಡಿ ; ಶಿಸ್ತು ಕ್ರಮಕ್ಕೆ ಶ್ರೀನಿವಾಸ್, ಜಯರಾಮ್ ಸೂಚನೆ ; ತಡಬಡಾಯಿಸಿದ ಅಧಿಕಾರಿಗಳ ತರಾಟೆ

ಗುಬ್ಬಿ: ಅಭಿವೃದ್ಧಿ ಹಾಗೂ ಸಮಸ್ಯೆ ಚರ್ಚೆ ನಡೆಯುವ ಕೆಡಿಪಿ ಸಭೆಗೆ ಹಾಜರಾಗುವಂತೆ ಸೂಚಿಸಿದ್ದರೂ ಗೈರಾಗಿರುವ ತಹಸೀಲ್ದಾರ್ ಹಾಗೂ ಬೆಸ್ಕಾಂ ಎಇಇ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲು ಶಾಸಕರಾದ ಎಸ್.ಆರ್.ಶ್ರೀನಿವಾಸ್ ಹಾಗೂ ಮಸಾಲಾ ಜಯರಾಂ ಸೂಚಿಸಿದರು.

ತಾಪಂ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಬಗರ್‌ಹುಕುಂ ಹಾಗೂ ಕೆಲ ವಿದ್ಯುತ್ ಉಪಸ್ಥಾವರ ಸ್ಥಾಪನೆಯ ಚರ್ಚೆ ವೇಳೆ ಉತ್ತರಿಸಲು ತಡಬಡಾಯಿಸಿದ ಇಲಾಖೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕರಿಬ್ಬರು, ಸರ್ಕಾರದ ಗಮನಕ್ಕೆ ತಂದು ಗೈರಾದವರ ವಿರುದ್ಧ ಶಿಸ್ತು ಕ್ರಮವಹಿಸಲು ಇಒಗೆ ಸೂಚಿಸಿದರು.

ಪ್ರತಿ ಸೋಮವಾರ ಡಿಸಿ ಮೀಟಿಂಗ್, ಸಿಇಒ ಮಿಟೀಂಗ್ ಎಂದು ಹಾಜರಾಗುವ ಅಧಿಕಾರಿಗಳಿಗೆ ಶಾಸಕರ ಸಭೆ ಮಹತ್ವ ಎನಿಸಿಲ್ಲವೆ? ಸಾರ್ವಜನಿಕರ ಕುಂದುಕೊರತೆ ಹೊತ್ತು ಕಚೇರಿಗೆ ಬಂದರೆ ಅಧಿಕಾರಿಗಳೇ ನಾಪತ್ತೆಯಾಗಿರುತ್ತಾಎ, ಹೀಗಾಗದರೆ ಕೆಲಸ ಮಾಡಲು ಹೇಗೆ ಸಾಧ್ಯ, ಸಮಸ್ಯೆಗಳಿಗೆ ಪರಿಹಾರ ನೀಡೋಡ್ಯಾರು ಎಂದು ಸಿಡಿಮಿಡಿಗೊಂಡ ಶ್ರೀನಿವಾಸ್, ಬಗರ್‌ಹುಕುಂ ದಾಖಲೆಗಳ ಬಗ್ಗೆ ಚರ್ಚಿಸಲು ತಹಸೀಲ್ದಾರ್ ಗೈರು ಆಗಿರುವುದು ಮುಜುಗರ ತರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉದ್ದೇಶಪೂರ್ವಕವಾಗಿ ತಹಸೀಲ್ದಾರ್ ರಜೆ ಹಾಕಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ ಮಸಾಲಾ ಜಯರಾಮ್, ಸಭೆಯ ನೋಟಿಸ್ ಜಾರಿ ನಂತರ ರಜೆ ಹಾಕಿದ್ದಾರೆ, ಶಾಸಕರಿಬ್ಬರ ಸಭೆಗೆ ಬೆಲೆ ಕೊಡದ ಅಧಿಕಾರಿಯಿಂದ ತಾಲೂಕು ಅಭಿವೃದ್ಧಿ ಹೇಗೆ ಮಾಡಿಸಲಾಗುತ್ತದೆ ಎಂದು ಪ್ರಶ್ನಿಸಿದರು.

ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಅನುಸರಿಸಿದ ಪಂಚಾಯತ್‌ರಾಜ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು, ಗ್ರಾಪಂ ಚುನಾವಣಾ ಕಾರ್ಯಕ್ಕೆ ಪಂಚಾಯತ್ ರಾಜ್ ಇಲಾಖೆಯ ಎಲ್ಲ ಇಂಜಿನಿಯರ್‌ಗಳನ್ನು ಬಳಸಿಕೊಂಡಿದ್ದರಿಂದ ಕ್ರಿಯಾ ಯೋಜನೆ ತಯಾರಿಸಲು ವಿಳಂಬವಾಗಿದೆ ಎಂದು ಎಇಇ ಶ್ರೀಪಾದ ಸಮಜಾಯಿಷಿ ನೀಡಿದರು.

ದುರಸ್ತಿಗೆ ಬಂದಿರುವ ನೀರಿನ ಘಟಕಗಳ ಮಾಹಿತಿಯೇ ಅಧಿಕಾರಿಗಳಿಗಿಲ್ಲ, ಚರ್ಚಿಸಲು ಎಇಇ ಮೇಘನಾಥ್ ಕೂಡಾ ಸಭೆಗೆ ಬಂದಿಲ್ಲ, ಒಂದು ದಿನ ಘಟಕ ಕೆಟ್ಟು ನಿಂತರೆ ಸಾವಿರಾರು ದಂಡ ಕಟ್ಟಿಸಿಕೊಳ್ಳುವ ನಿಯಮವಿದೆ, ಇದರ ಪಾಲನೆ ಎಂದೂ ಆಗಿಲ್ಲ. ಗ್ರಾಪಂಗಳಲ್ಲೇ ಘಟಕಗಳು ರಿಪೇರಿಗೆ ಬಂದ ಉದಾಹರಣೆ ಸಾಕಷ್ಟಿವೆ. ಸಂಬಂಧಪಟ್ಟ ಏಜೆನ್ಸಿಯನ್ನು ಹೊಣೆ ಮಾಡಿ ದಂಡ ವಸೂಲಿ ಮಾಡುವಂತೆ ಮಸಾಲ ಜಯರಾಮ್ ತಾಕೀತು ಮಾಡಿದರು.

ಜಿಪಂ ಸದಸ್ಯರಾದ ಜಿ.ಎಚ್.ಜಗನ್ನಾಥ್, ಜಿ.ರಾಮಾಂಜಿನಯ್ಯ, ಡಾ.ನವ್ಯಾಬಾಬು, ಕೆ.ಯಶೋಧಮ್ಮ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಯೋಗೀಶ್ ಇತರರು ಇದ್ದರು.

ಅಮಾನತಿಗೆ ವಿಧಾನಸೌಧದಲ್ಲೇ ಚರ್ಚಿಸುವೆ: ಸಭೆಗೆ ಹಾಜರಾಗದ ಎಲ್ಲ ಅಧಿಕಾರಿಗಳ ವಿರುದ್ಧ ಪತ್ರ ಬರೆಯಲಾಗುವುದು ಜತೆಗೆ ಅಮಾನತು ಕುರಿತು ವಿಧಾನಸೌಧದಲ್ಲೇ ಚರ್ಚಿಸುವುದಾಗಿ ಶಾಸಕ ಶ್ರೀನಿವಾಸ್ ಎಚ್ಚರಿಸಿದರು. ಬಗರ್‌ಹುಕುಂ ಯೋಜನೆಯಡಿ ಅರ್ಜಿ ಹಾಕಿಕೊಂಡು ಹಲವಾರು ವರ್ಷಗಳಿಂದ ಅನುಭವದಲ್ಲಿರುವ ರೈತರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆ. ಅದೇ ಭೂಮಿ ನಂಬಿರುವ ರೈತರು ಎತ್ತ ಹೋಗಬೇಕು. ಅವರು ಸಲ್ಲಿಸಿರುವ ಅರ್ಜಿ ಬಗರ್‌ಹುಕುಂ ಸಮಿತಿಯಲ್ಲಿದೆ, ರೈತರಿಗೆ ತೊಂದರೆ ನೀಡದಂತೆ ಕಟ್ಟಪ್ಪಣೆ ಮಾಡಿದರು.