ಜಿಲ್ಲೆ

ಅಧಿಕಾರಿಗಳ ಕಾರ್ಯವೈಖರಿಗೆ ಗರಂ

ಕಾರವಾರ: ಅರಣ್ಯ ಇಲಾಖೆ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳ ಕಾರ್ಯವೈಖರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಶಿವರಾಮ ಹೆಬ್ಬಾರ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಪಂಚಾಯಿತಿಯಿಂದ ಮಂಗಳವಾರ ಆಯೋಜಿಸಿದ್ದ ತ್ರೖೆಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಏಳಕ್ಕೂ ಹೆಚ್ಚು ವಿದ್ಯುತ್ ಉಪ ಕೇಂದ್ರವನ್ನು ಸ್ಥಾಪಿಸಬೇಕಿದೆ. ಈ ಕುರಿತು ಅರಣ್ಯ ಅನುಮತಿ ಪಡೆಯಲು ಸಮರ್ಪಕವಾಗಿ ಅರ್ಜಿ ಸಲ್ಲಿಸುತ್ತಿಲ್ಲ. ಅದನ್ನು ಫಾಲೋ ಅಪ್ ಮಾಡುತ್ತಿಲ್ಲ. ಇದರಿಂದ ಏಳೆಂಟು ವರ್ಷ ಕಳೆದರೂ ಯೋಜನೆ ಜಾರಿಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅರಣ್ಯ ಅಧಿಕಾರಿಗಳ ಬಗ್ಗೆಯೂ ಆಕ್ಷೇಪಿಸಿದ ಹೆಬ್ಬಾರ, ‘ವೇದಾಂತ ಹೇಳೋರು ಎಲ್ಲಿಂದ ಬಂದಿರಿ. ಜಿಲ್ಲೆಯ ಕಾಡು ಉಳಿಸಿದವರು ನಾವು. ಪುಸ್ತಕ ಓದಿಕೊಂಡು ಬಂದರೆ ಜಿಲ್ಲೆಯ ಅಭಿವೃದ್ಧಿ ಸಾಧ್ಯವಿಲ್ಲ. ಜೊಯಿಡಾ ಭಾಗದಲ್ಲಿ ವನ್ಯಜೀವಿ ಸಂರಕ್ಷಣೆಯ ನೆಪದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ತಡೆಯೊಡ್ಡುತ್ತಿದ್ದೀರಿ. ಜಿಲ್ಲೆಯಲ್ಲಿ ಅರಣ್ಯದ ಆಕ್ಷೇಪಣೆಯಿಂದ ಎರಡೂವರೆ ವರ್ಷದಲ್ಲಿ 26 ಕೋಟಿ ರೂ.ಗಳ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಸೇತುವೆಗಳಿಗೆ ಕಂಬ ಹಾಕಲಾಗಿದ್ದರೂ ಕಾಂಕ್ರೀಟ್ ಹಾಕಲು ಬಿಡುತ್ತಿಲ್ಲ. ವಿದ್ಯುತ್ ಕಂಬ ಹೋದರೆ ಅದನ್ನು ಹಾಕಲು ಅವಕಾಶ ನೀಡುವುದಿಲ್ಲ. ಅಲ್ಲಿನ ಜನ ಬದುಕುವುದು ಬೇಡವೇ? ಹೀಗೆ ಅಭಿವೃದ್ಧಿಗೆ ತಡೆಯೊಡ್ಡುವ ಅಧಿಕಾರಿಗಳನ್ನು ಇಲ್ಲಿರಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಒಬ್ಬ ಗುತ್ತಿಗೆದಾರನಿಗೆ 14 ಕಾಮಗಾರಿ: ಅಂಕೋಲಾದಲ್ಲಿ ಒಬ್ಬನೇ ಗುತ್ತಿಗೆದಾರ 14 ಶಾಲೆಗಳ ರಿಪೇರಿ ಕಾಮಗಾರಿಗಳನ್ನು ಪಡೆದಿದ್ದಾನೆ. ಕಾಮಗಾರಿಯನ್ನೂ ಪ್ರಾರಂಭಿಸದೇ ತೊಂದರೆ ನೀಡುತ್ತಿದ್ದಾನೆ ಎಂಬ ವಿಷಯ ಸಭೆಯಲ್ಲಿ ಚರ್ಚೆಗೆ ಬಂತು. ನೋಟಿಸ್ ನೀಡಿ ಕಾನೂನು ಕ್ರಮ ವಹಿಸುವಂತೆ ಸಚಿವ ಹೆಬ್ಬಾರ ಸೂಚಿಸಿದರು. ಶಾಸಕರಾದ ರೂಪಾಲಿ ನಾಯ್ಕ, ಸುನೀಲ ನಾಯ್ಕ, ಎಂಎಲ್​ಸಿ ಶಾಂತಾರಾಮ ಸಿದ್ದಿ, ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಒಂ ಸಿಇಒ ಎಂ.ರೋಶನ್, ಎಸ್​ಪಿ ಶಿವಪ್ರಕಾಶ ದೇವರಾಜು ವೇದಿಕೆಯಲ್ಲಿದ್ದರು.

ಹೆಬ್ಬಾರ ಸೂಚನೆ: ಜಿಲ್ಲೆಯಲ್ಲಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಸಿದ್ಧವಿರುವ ಕಾಮಗಾರಿಗಳ ಪಟ್ಟಿಯನ್ನು ಒಂದು ದಿನದಲ್ಲಿ ಒದಗಿಸಿ. ಉಸ್ತುವಾರಿ ಸಚಿವನಾದ ನನಗೂ ಕಾಯುವ ಅವಶ್ಯಕತೆ ಇಲ್ಲ ಸ್ಥಳೀಯ ಶಾಸಕರಿಗೆ ತಿಳಿಸಿ ಕಾಮಗಾರಿ, ಪ್ರಾರಂಭಿಸಿ ಉದ್ಘಾಟಿಸಿ.ಬೆಳೆ ವಿಮೆ ರೈತರಿಗೆ ಪಾವತಿಯಾದ ಮಾಹಿತಿಯನ್ನು ಜಿಲ್ಲಾಡಳಿತ ಹಾಗೂ ಡಿಸಿಸಿ ಬ್ಯಾಂಕ್​ಗೆ ಒದಗಿಸಿ. *ಭತ್ತ ಖರೀದಿ ಕೇಂದ್ರವನ್ನು ಶಿರಸಿಯ ಬದಲು ದಾಸನಕೊಪ್ಪ ಅಥವಾ ಬನವಾಸಿಯಲ್ಲಿ ಮಾಡುವ ಬಗ್ಗೆ ಪರಿಶೀಲನೆ ನಡೆಸಿ. *400 ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ವಿುಸಲು ಶಾಸಕರು,ನಗರ ಸ್ಥಳೀಯ ಸಂಸ್ಥೆಗಳೂ ಅನುದಾನ ನೀಡಿ *ಗಂಗಾ ಕಲ್ಯಾಣ ಯೋಜನೆ ಜಾರಿ ಅಸಮರ್ಪಕವಾಗಿದ್ದರಿಂದ ಶೋಷಿತ ಸಮುದಾಯವರಿಗೆ ಅನ್ಯಾಯವಾಗಿದೆ. ಅಧಿಕಾರಿಗಳು ಬೋರ್​ವೆಲ್ ಹಾಗೂ ವಿದ್ಯುತ್ ಸಂಪರ್ಕ ಒದಗಿಸಲು ಕ್ರಮ ವಹಿಸಿ.

‘ನಾನು ಜೈಲಿಗೆ ಹೋಗಿ ಬಂದಿದ್ದೇನೆ’ ಎನ್ನುವ ಬಂದರು ಅಧಿಕಾರಿ: ಬಂದರು ಇಲಾಖೆ ನಿರ್ದೇಶಕ ಕ್ಯಾಪ್ಟನ್ ಸಿ.ಸ್ವಾಮಿ ಅವರಿಂದ ಹೈಕೋರ್ಟ್​ನಲ್ಲಿ ಜಿಲ್ಲಾಡಳಿತ ಮುಜುಗರ ಅನುಭವಿಸಬೇಕಾಯಿತು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಅಳಲು ತೋಡಿಕೊಂಡರು.

ಬೈತಖೋಲದಲ್ಲಿ ಬಂದರು ಇಲಾಖೆ ಭೂ ಸ್ವಾಧೀನ, ಸಾಗರ ಮಾಲಾ ಯೋಜನೆ ಸಂಬಂಧ ಹೈಕೋರ್ಟ್​ನಲ್ಲಿರುವ ಪ್ರಕರಣಗಳಲ್ಲಿ ಬಂದರು ಇಲಾಖೆ ನಿರ್ದೇಶಕರು ಭಾಗವಹಿಸುವುದಿಲ್ಲ. ಕಾರ್ಯನಿರ್ವಾಹಕ ಇಂಜಿನಿಯರಿಂದ ಅಫಿಡವಿಟ್ ಹಾಕಿಸುತ್ತಾರೆ. ಇಲಾಖೆ ಸಚಿವರ ಸಭೆ, ಕೆಡಿಪಿ ಸಭೆಗಳಿಗೂ ಭಾಗವಹಿಸುವುದಿಲ್ಲ ಎಂದು ದೂರಿದರು.

ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ನಾವು ಸರ್ಕಾರದಲ್ಲಿ ಕೈಕಾಲು ಹಿಡಿದು ಹಣ ತರುತ್ತೇವೆ. ಬಂದರು ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಂದ 17 ಕೋಟಿ ರೂ. ವಾಪಸಾಗುವ ಹಂತದಲ್ಲಿದೆ. ಈ ಕುರಿತು ಪ್ರಶ್ನಿಸಿದರೆ, ನಿರ್ದೇಶಕ ಕ್ಯಾಪ್ಟನ್ ಸ್ವಾಮಿ ‘ನಾನು ಜೈಲಿಗೆ ಹೋಗಿ ಬಂದಿದ್ದೇನೆ ನಿಮ್ಮ ಹೆದರಿಕೆ ಇಲ್ಲ’ ಎಂದು ಉತ್ತರಿಸುತ್ತಾರೆ ಎಂದು ಅಸಮಾಧಾನ ಹೊರ ಹಾಕಿದರು. ಅಧಿಕಾರಿಗೆ ನೋಟಿಸ್ ಕೊಟ್ಟು ಮುಖ್ಯ ಕಾರ್ಯದರ್ಶಿಗೆ ಕಳಿಸಿಕೊಡಿ. ಬೈತಖೋಲ ಭೂ ಸ್ವಾಧೀನ ಸಮಸ್ಯೆ ಕುರಿತು ಒಂದು ಪ್ರತ್ಯೇಕ ಸಭೆ ಆಯೋಜಿಸಿ ಎಂದು ಸಚಿವ ಹೆಬ್ಬಾರ ಸೂಚಿಸಿದರು.

ನೀರಾ ತೆಗೆಯಲು ಪ್ರಸ್ತಾವನೆ: ಜಿಲ್ಲೆಯಲ್ಲಿ ತೆಂಗಿನ ಮರದಿಂದ ನೀರಾ ತೆಗೆಯಲು ಅವಕಾಶ ಕಲ್ಪಿಸುವ ಸಂಬಂಧ ಪ್ರಸ್ತಾವನೆ ಸಲ್ಲಿಸಿ ಎಂದು ಶಿವರಾಮ ಹೆಬ್ಬಾರ ತೋಟಗಾರಿಕೆ ಅಧಿಕಾರಿಗಳಿಗೆ ಸೂಚಿಸಿದರು. ರೈತರಿಗೆ ನೇರವಾಗಿ ನೀರಾ ತೆಗೆಯಲು ಅವಕಾಶ ನೀಡುವುದಿಲ್ಲ. ಸಂಘಟನೆಯೊಂದರ ಮೂಲಕ ಈ ವ್ಯವಸ್ಥೆ ಮಾಡಲಾಗುವುದು. ನೀರಾ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಧಾನಸಭೆ ಹಾಗೂ ವಿಧಾನ ಪರಿಷತ್​ನಲ್ಲಿ ಎಲ್ಲ ಶಾಸಕರಿಗೆ ನಾಲ್ಕು ದಿನ ನೀರಾ ನೀಡಿದ್ದೆವು ಎಂದು ಸಚಿವರು ವಿವರಿಸಿದರು.