ಚಿತ್ತಾಪುರ: ಕಲಬುರಗಿ ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಕ ಧನಶೆಟ್ಟಿ ಹೆಡಗಾಪುರೆ ಅವರ ಮೇಲೆ ಹಲ್ಲೆ ಹಾಗೂ ಜಾತಿನಿಂದನೆ ಮಾಡಿದ ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿ ತಹಸಿಲ್ ಕಚೇರಿ ಎದುರು ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜ ಸೋಮವಾರ ಪ್ರತಿಭಟನೆ ನಡೆಸಿತು.
ಮುಖಂಡ ಅಂಬರೇಶ ಸುಲೇಗಾಂವ್ ಮಾತನಾಡಿ, ಧನಶೆಟ್ಟಿ ಅವರು ದಕ್ಷ ಅಧಿಕಾರಿಯಾಗಿದ್ದಾರೆ. ಹಣ ನೀಡುವಂತೆ ಅವಿನಾಶ ಎನ್ನುವರು ಒತ್ತಾಯಿಸುತ್ತಿದ್ದರು. ವೈಯಕ್ತಿಕ ಕೆಲಸಗಳಿಗೆ ಹೊರಗೆ ಬರುವಂತೆ ಕರೆಯುತ್ತಿದ್ದರು. ಅಂಗಡಿಗೆ ಪರವಾನಿಗೆ ಹಾಕಿಸಿ ತಪ್ಪು ವರದಿ ನೀಡುವಂತೆ ಒತ್ತಾಯಿಸುತ್ತಿದ್ದರು. ಅದನ್ನು ನಿರಾಕರಿಸಿದ್ದಕ್ಕೆ ನಿಂದಿಸಿ ಹಲ್ಲೆ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾದರೂ ಇಲ್ಲಿವರೆಗೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಕಿಡಿಕಾರಿದರು.
ತಹಸೀಲ್ದಾರ್ ಸೈಯ್ಯದ್ ಷಾ ವಲಿ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಕೂಡಲೆ ಹಲ್ಲೆಯನ್ನು ವಿಶೇಷ ಪ್ರಕರಣವೆಂದು ಭಾವಿಸಿ, ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಮಹಾಸಭಾ ತಾಲೂಕು ಗೌರವಾಧ್ಯಕ್ಷ ಲಿಂಗಾರೆಡ್ಡಿಗೌಡ ಭಾಸರೆಡ್ಡಿ, ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ, ಪ್ರಮುಖರಾದ ಸೋಮಶೇಖರ ಪಾಟೀಲ್ ಬೆಳಗುಂಪಾ, ಚಂದ್ರಶೇಖರ ಅವಂಟಿ, ರವೀಂದ್ರ ಸಜ್ಜನಶೆಟ್ಟಿ, ಶಿವಲಿಂಗಪ್ಪ ವಾಡೇದ್, ಅಶೋಕ ನಿಪ್ಪಾಣಿ, ಬಸವರಾಜಗೌಡ ಆಲೂರ, ಕೋಟೇಶ್ವರ ರೇಷ್ಮಿ ಇತರರಿದ್ದರು.