ಮುಳಬಾಗಿಲು: 2023ರಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆ ಜಾರಿಗೆ ತಂದು ಗ್ರಾಪಂ ವ್ಯಾಪ್ತಿಯಲ್ಲೇ ಉಚಿತ ಶಿಕ್ಷಣ, ಆರೋಗ್ಯ ಸೇವೆ ಸೇರಿ ಮೂಲಸೌಲಭ್ಯ ಕಲ್ಪಿಸಲಾಗುವುದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ನಗರ ಹೊರವಲಯದ ಪೂಲ್‌ಚಂದ್‌ಜೈನ್ ಕಲ್ಯಾಣಮಂಟಪದಲ್ಲಿ ಶುಕ್ರವಾರ ಎಂಎಲ್‌ಸಿ ಚುನಾವಣೆ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿ, ರಾಜ್ಯದ 6 ಸಾವಿರ ಗ್ರಾಪಂ ಕೇಂದ್ರಗಳಲ್ಲಿ ಸುಸಜ್ಜಿತ ಶಾಲೆ ನಿರ್ಮಿಸಿ ಎಲ್‌ಕೆಜಿಯಿಂದ ಪಿಯುವರೆಗೂ ಉಚಿತ ಗುಣಮಟ್ಟದ ಶಿಕ್ಷಣ, 30 ಹಾಸಿಗೆಯ ಸರ್ಕಾರಿ ಆಸ್ಪತ್ರೆ ತೆರೆದು ವೈದ್ಯಕೀಯ ಚಿಕಿತ್ಸೆ ಉಚಿತವಾಗಿ ನೀಡುವ ಸಂಕಲ್ಪ ಹೊಂದಿದ್ದೇವೆ ಎಂದರು.
ರೈತರಿಗೆ ಸುಲಭ ಸಾಲಸೌಲಭ್ಯ ಸಿಗುವಂತೆ ಮಾಡಲಾಗುವುದು. ಉದ್ಯೋಗ ಸೃಷ್ಟಿಸುವ ಮೂಲಕ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಮಾಡಲಾಗುವುದು. ಆರ್ಥಿಕವಾಗಿ ಗ್ರಾಮೀಣರು ಅಭಿವೃದ್ಧಿಯಾಗಬೇಕಾಗಿದ್ದು, ಈ ನಿಟ್ಟಿನಲ್ಲಿ ಜೆಡಿಎಸ್ ಪಂಚರತ್ನ ಪ್ರಣಾಳಿಕೆಯನ್ನು ಜನವರಿಯಲ್ಲಿ ಬಿಡುಗಡೆ ಮಾಡಿ ಪ್ರತಿ ಗ್ರಾಮದಲ್ಲೂ ಪ್ರಚಾರದ ಮೂಲಕ 2023ರ ಚುನಾವಣೆಯಲ್ಲಿ ಜೆಡಿಎಸ್ ಮತ್ತೊಮ್ಮೆ ಅಧಿಕಾರಕ್ಕೆ ತಂದು ಬಿಜೆಪಿ, ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಾಗುವುದು ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಳಬಾಗಿಲು ಕ್ಷೇತ್ರ ಸೇರಿ ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಜೆಡಿಎಸ್ ಸೋಲಲು ಮುಸ್ಲಿಮರ ಮತಗಳು ಬಾರದಿರುವುದೇ ಕಾರಣ. ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳು ಜನರನ್ನು ದಿಕ್ಕು ತಪ್ಪಿಸುತ್ತಿವೆ. ಇನ್ನಾದರೂ ಅರ್ಥ ಮಾಡಿಕೊಂಡು ಮುಂಬರುವ ಚುನಾವಣೆಗಳಲ್ಲಿ ಜೆಡಿಎಸ್ ಬೆಂಬಲಿಸಬೇಕೆಂದು ಅಲ್ಪಸಂಖ್ಯಾತರಲ್ಲಿ ಮನವಿ ಮಾಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಳಬಾಗಿಲು ಮೀಸಲು ಕ್ಷೇತ್ರದಲ್ಲಿ ಪಕ್ಷದ ಚಿಹ್ನೆಯೇ ಇಲ್ಲದ ವ್ಯಕ್ತಿ ಎಚ್.ನಾಗೇಶ್ ಗೆಲುವಿಗೆ ಮುಸ್ಲಿಮರ ಮತ ಕಾರಣವಾಗಿದೆ. 7 ಸಾವಿರ ಮತಗಳಲ್ಲಿ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ವಿ.ಮಂಜುನಾಥ್ ಸೋಲು ಕಂಡಿದ್ದಾರೆ. ಆದರೆ ಅವರು ಸೋತರೂ ಕ್ಷೇತ್ರದಲ್ಲಿದ್ದು ಸೇವೆ ಸಲ್ಲಿಸುತ್ತಿದ್ದಾರೆ. ಜನ ಗೆಲ್ಲಿಸಿದ ಶಾಸಕರು ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸಿ ಜೆಡಿಎಸ್ ಕೋಟಾದಡಿ ಸಚಿವರಾದರು. ಆದರೂ ನಿಯತ್ತಿಲ್ಲದೆ ರಾಜೀನಾಮೆ ನೀಡಿ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿ ಸಚಿವರಾಗಿದ್ದಾರೆ. ಇದು ಯಾವ ಸೀಮೆ ನ್ಯಾಯ. ಈ ಬಗ್ಗೆ ನೀವು ಏಕೆ ಪ್ರಶ್ನಿಸುವುದಿಲ್ಲ ಎಂದು ವೇದಿಕೆಯಲ್ಲಿದ್ದ ಮುಸ್ಲಿಂ ಮುಖಂಡರನ್ನು ಪ್ರಶ್ನಿಸಿದರು.
ದಿವಂಗತ ಆಲಂಗೂರು ಶ್ರೀನಿವಾಸ್ ಕೋಲಾರ ಜಿಲ್ಲೆಯ ಜೆಡಿಎಸ್ ಆಧಾರಸ್ತಂಭವಾಗಿದ್ದರು. ಕೋಲಾರ ಜಿಲ್ಲೆಯಲ್ಲಿದ್ದ ಜೆಡಿಎಸ್ ಶಾಸಕರು, ಮುಖಂಡರು ಸಾಮೂಹಿಕವಾಗಿ ಕಾಂಗ್ರೆಸ್‌ಗೆ ಹೋದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಜೆಡಿಎಸ್ ಕಟ್ಟಿ ಬೆಳೆಸಲು ಮುಳಬಾಗಿಲಿನ ಶಾಸಕರು, ಆಲಂಗೂರು ಶ್ರೀನಿವಾಸ್ ಅವರ ಪಾತ್ರ ಅಮೂಲ್ಯ. ಆದರೆ ಇಂದು ಸಹೋದರ ಆಲಂಗೂರು ಶಿವಣ್ಣ ಮತ್ತು ಅವರ ಬೆಂಬಲಿಗರು ಸಭೆಗೆ ಬಾರದೆ ಅಂತರ ಕಾಯ್ದುಕೊಂಡಿದ್ದಾರೆ ಎಂದರು.
ನಮ್ಮದಲ್ಲ ಬಿ ಟೀಂ, ನಿಮ್ಮದು: ಕಾಂಗ್ರೆಸ್‌ನ ಕೆಲ ಮುಖಂಡರು ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎನ್ನುತ್ತಾರೆ. ಎರಡು ರಾಷ್ಟ್ರೀಯ ಪಕ್ಷ ಸೇರಿ ಜೆಡಿಎಸ್ ಮುಗಿಸುವ ಹುನ್ನಾರ ನಡೆಸುತ್ತಿವೆ. ಅದಕ್ಕೆ ಆಸ್ಪದ ನೀಡುವುದಿಲ್ಲ. ಇಬ್ಬಗೆಯ ನೀತಿ ಬಗ್ಗೆ ಜನಜಾಗೃತಿ ಮೂಡಿಸಲಾಗುವುದು. ಬಿಜೆಪಿ ಸರ್ಕಾರದಲ್ಲಿ ಸಚಿವರ ಆಪ್ತ ಕಾರ್ಯದರ್ಶಿಗೆ ಮಂಡ್ಯದಲ್ಲಿ ಕಾಂಗ್ರೆಸ್ ಟಿಕೆಟ್ ನೀಡಲಾಗಿದ್ದು, ಬಿಜೆಪಿ ಮುಖಂಡನ ಪುತ್ರನಿಗೆ ಕೊಡಗಿನಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿದ್ದಾರೆ. ಕಾಂಗ್ರೆಸ್ಸೇ ಬಿಜೆಪಿ ಬಿ ಟೀಂ ಆಗಿದೆ. ಜೆಡಿಎಸ್ ಜಾತ್ಯತೀತ ಪಕ್ಷ ಎಂದು ಎಚ್‌ಡಿಕೆ ಹೇಳಿದರು.
ಹಣದಿಂದ ಚುನಾವಣೆ ಗೆಲ್ಲಲು ಹೊರಟಿದ್ದಾರೆ: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯು ಸರ್ಕಾರದ ಸಾಧನೆ ಮುಂದಿಡದೆ ಹಣ ಕೊಟ್ಟು ಮತ ಪಡೆಯುವ ಅಹಂಕಾರದಲ್ಲಿದ್ದು, ಸಂಕಷ್ಟದ ದಿನ ಎದುರಿಸುತ್ತಿರುವ ಜೆಡಿಎಸ್ 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ವಂತ ಬಲದಲ್ಲಿ ಅಧಿಕಾರ ಹಿಡಿಯುವ ಗುರಿ ಸಾಧಿಸಲು ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು.
ನಾರಾಯಣಿ ಕನ್ವೆನ್ಷಷನಲ್ ಹಾಲ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಧಾನಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಕೋವಿಡ್ ನಿರ್ವಹಣೆಯಲ್ಲಿ ವಿಲವಾಗಿ 2ನೇ ಅಲೆಯಲ್ಲಿ ಸುಮಾರು 35,000 ಕುಟುಂಬಗಳನ್ನು ಅನಾಥರನ್ನಾಗಿ ಮಾಡಿದ್ದೇ ರಾಜ್ಯ ಸರ್ಕಾರದ ಸಾಧನೆ. ಅಕಾಲಿಕ ಮಳೆಯಿಂದ 10 ಲಕ್ಷ ಹೆಕ್ಟೇರ್ ಬೆಳೆ ನಾಶವಾದರೂ ಬಿಜೆಪಿ ರೈತರ ನೆರವಿಗೆ ಬರುವ ಸೂಚನೆ ಕಾಣುತ್ತಿಲ್ಲ. ಹಿಂದಿನ ಉಪ ಚುನಾವಣೆಗಳನ್ನು ಹಣದಿಂದ ಗೆದ್ದ ರೀತಿಯಲ್ಲೇ ಪರಿಷತ್ ಚುನಾವಣೆ ಗೆಲ್ಲಲು ಹೊರಟಿದೆ ಎಂದು ಟೀಕಿಸಿದರು.
ಬಿಜೆಪಿ ದೊಡ್ಡ ಮಟ್ಟದಲ್ಲಿ ಚುನಾವಣೆಗೆ ಹೊರಟಿದೆ. ಆದರೆ ಅದು ಕಷ್ಟ ಪಟ್ಟು ಸಂಪಾದಿಸಿದ ಹಣ ಅಲ್ಲ. ನಾವು ಹಣ ಹಂಚಿಕೆಯಿಂದಲ್ಲ, ದುಡಿಮೆ ಆಧಾರದಲ್ಲಿ ಮತ ಕೇಳುತ್ತಿದ್ದೇವೆ ಎಂದರು.