ಮೈಸೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಬಡವರ ಪರ ನಿಲುವು ತಾಳಿ, ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುತ್ತಿದೆ. ಇಂತಹ ಸಮಯದಲ್ಲಿ ಅಧಿಕಾರ ಹಂಚಿಕೆ ವಿಚಾರ ಅಪ್ರಸ್ತುತ ಎಂದು ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಪ್ರತಿಕ್ರಿಯಿಸಿದರು.
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಶನಿವಾರ ಭೇಟಿ ನೀಡಿ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನಮ್ಮ ಸರ್ಕಾರ ಭದ್ರವಾಗಿದ್ದು, ಉತ್ತಮ ಆಡಳಿತ ನಡೆಸುತ್ತಿದೆ. ಕೊಟ್ಟ ಭರವಸೆ ಈಡೇರಿಸುತ್ತ ದಿಟ್ಟ ಹೆಜ್ಜೆ ಇಟ್ಟಿದ್ದು, ಬಡವರಿಗೆ ಏನು ಕಾರ್ಯಕ್ರಮ ಮಾಡುತ್ತಿದ್ದೇವೆ ಎನ್ನುವ ಬಗ್ಗೆ ಮಾತನಾಡಲಿ. ಆದರೆ ಅಧಿಕಾರ ಹಂಚಿಕೆ ವಿಚಾರ ಅಪ್ರಸ್ತುತ ಎಂದರು.
ಈಗಾಗಲೇ ಮೂರು ಗ್ಯಾರಂಟಿ ಕಾರ್ಯಗತವಾಗಿದೆ. ಶಕ್ತಿ ಯೋಜನೆಯಿಂದ ನಿತ್ಯ 50 ಲಕ್ಷಕ್ಕೂ ಹೆಚ್ಚು ಮಹಿಳೆಯರು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಯ ಪ್ರಯೋಜನ ಜನರಿಗೆ ದೊರೆಯುತ್ತಿದೆ ಎಂದು ತಿಳಿಸಿದರು.
ಪರಿಸರ ಸಂರಕ್ಷಣೆ, ಪ್ರಾಣಿ ಸಂರಕ್ಷಣೆ, ಪಶುಗಳ ಸಂರಕ್ಷಣೆ, ವಿಶೇಷವಾಗಿ ಪ್ರಾಣಿ ಮತ್ತು ಮಾನವ ಸಂಘರ್ಷಗಳನ್ನು ತಡೆಗಟ್ಟುವುದು ಮುಖ್ಯ ಕರ್ತವ್ಯವಾಗಿದೆ. ಚಾಮರಾಜನಗರದ ಸುಶೀಲಾ ಎಂಬ ಬಾಲಕಿಯ ಮೇಲೆ ಚಿರತೆ ದಾಳಿ ಮಾಡಿರುವುದು ಬೇಸರ ತಂದಿದೆ. ಸರ್ಕಾರದಿಂದ ಆಕೆ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ, ತಿಂಗಳಿಗೆ 4 ಸಾವಿರ ರೂ. ಮಾಸಾಶನ ನೀಡುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗುವುದು ಎಂದು ತಿಳಿಸಿದರು.
ಅನೆ ತುಳಿತದಿಂದ ಅಗುವ ಸಾವಿನ ವಿಚಾರದಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು. ಆನೆಗಳು ಒಂದೆಡೆಯಿಂದ ಮತ್ತೊಂದೆಡೆಗೆ ಚಲಿಸುತ್ತಲೇ ಇರುವುದರಿಂದ ಅವುಗಳನ್ನು ತಡೆಯಲು ಸಾಧ್ಯವಿಲ್ಲ. ಆದರೆ ಗ್ರಾಮ, ಜಮೀನಿಗೆ ನುಗ್ಗಿ ಅಗುವ ತೊಂದರೆ ತಡೆಯಲು ರಾಜ್ಯದಲ್ಲಿ 640 ಕಿಮೀ ರೈಲ್ವೆ ಕಂಬಿ ಬ್ಯಾರಿಕೇಡ್ ಅಳವಡಿಸಬೇಕು ಎನ್ನುವ ಪ್ರಸ್ತಾವನೆ ಇದೆ. ಈಗಾಗಲೇ 312.5 ಕಿ.ಮೀ ಬ್ಯಾರಿಕೇಡ್ ನಿರ್ಮಾಣ ಮಾಡಿದ್ದೇವೆ. ಇನ್ನು 330 ಕಿ.ಮೀ ನಿರ್ಮಿಸಬೇಕು. ಈಗಾಗಲೇ ಸೋಲಾರ್ ವ್ಯವಸ್ಥೆ ಅಳವಡಿಕೆ, ಕಂದಕಗಳ ನಿರ್ಮಾಣ ಮಾಡಲಾಗಿದೆ. ಹೆಚ್ಚಿನ ಅನುದಾನಕ್ಕೆ ಮುಖ್ಯಮಂತ್ರಿಯಲ್ಲಿ ಮನವಿ ಮಾಡಲಾಗಿದೆ ಎಂದು ವಿವರಿಸಿದರು.