ಬಾಗಲಕೋಟೆಯ ವೃದ್ಧಾಶ್ರಮದಲ್ಲಿ ಹಿರಿಯರಿಗೆ ಊಟ ಬಡಿಸಿದ ಶಾಸಕ ಮೇಟಿ.  
ಜಿಲ್ಲೆ

ಅಧಿಕಾರ ಶಾಶ್ವತವಲ್ಲ ಸೇವೆ ಅಜರಾಮರ

ಬಾಗಲಕೋಟೆ: ಅಧಿಕಾರ ಜನರು ಕೊಟ್ಟ ಅವಕಾಶ. ಅದು ಶಾಶ್ವತವಲ್ಲ. ಅಧಿಕಾರ ಒಮ್ಮೆ ಬರುತ್ತದೆ, ಮತ್ತೊಮ್ಮೆ ಹೋಗುತ್ತದೆ. ಆದರೆ, ಅಧಿಕಾರ ಇದ್ದಾಗ ನಾವು ಮಾಡುವ ಕಾರ್ಯ ಅಜರಾಮರವಾಗಿರುತ್ತವೆ. ನಾನು ನನ್ನ ಉಸಿರು ಇರುವವರೆಗೂ ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುವೆ ಎಂದು ಬಾಗಲಕೋಟೆ ಶಾಸಕ ಎಚ್.ವೈ.ಮೇಟಿ ಹೇಳಿದರು.

ತಾಲೂಕಿನ ರಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಮ್ಮ ೭೮ನೇ ಜನ್ಮದಿನದ ಅಂಗವಾಗಿ ಆರೋಗ್ಯ ಇಲಾಖೆಯಿಂದ ಅಂಬ್ಯುಲೆನ್ಸ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ತಿಮ್ಮಾಪುರ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ನನಗೆ, ಜನರ ಸಹಕಾರ-ವಿಶ್ವಾಸದಿಂದ ಎಲ್ಲ ರೀತಿಯ ಅಧಿಕಾರ ದೊರೆತಿದೆ. ಅಧಿಕಾರ ಇರಲಿ, ಬಿಡಲಿ ಸದಾ ಜನರ ಸೇವೆ ಮಾಡುತ್ತ ಬಂದಿದ್ದೇನೆ. ಸಮಾಜದಲ್ಲಿ ಎಲ್ಲ ವರ್ಗದ ಜನರಿಗೂ ಸರ್ಕಾರದ ಸೌಲಭ್ಯ ದೊರೆಯಬೇಕು ಎಂಬುದು ನನ್ನ ಬದ್ಧತೆ ಎಂದರು.
ಯಾವುದೇ ಜಾತಿ, ಧರ್ಮ ಎಂಬ ಬೇಧವಿಲ್ಲದೇ ಸಮಾಜದ ಪ್ರತಿಯೊಂದು ವರ್ಗದವರಿಗೂ ಸರ್ಕಾರಿ ಸೌಲಭ್ಯ ದೊರೆಯಬೇಕು ಎಂಬುದೇ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶಯ. ಅದಕ್ಕಾಗಿ ಗೃಹಜ್ಯೋತಿ, ಗೃಹಜ್ಯೋತಿ ಯೋಜನೆ ಜಾರಿಗೊಳಿಸಿದ್ದು, ಕೋಟ್ಯಾಂತರ ಜನರು ಇದರ ಲಾಭ ಪಡೆಯುತ್ತಿದ್ದಾರೆ. ಬಾಗಲಕೋಟೆ ಕ್ಷೇತ್ರದಲ್ಲೂ ಎಲ್ಲ ಜಾತಿ, ಧರ್ಮದ ಜನರು ಸೌಹಾರ್ದತೆಯಿಂದ ಇರಬೇಕು. ಅರ್ಹರಿಗೆ ಸರ್ಕಾರಿ ಸೌಲಭ್ಯ ದೊರೆಯಬೇಕು. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಸಧ್ಯ ಜಿಲ್ಲೆಯಲ್ಲಿ ತೀವ್ರ ಬರ ಎದುರಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ತಮ್ಮ ಹುಟ್ಟುಹಬ್ಬವನ್ನು ಸಮಾಜಮುಖಿ ಕಾರ್ಯದ ಮೂಲಕ ಆಚರಿಸಲು ನಿರ್ಧರಿಸಿ, ರಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೊಸದಾಗಿ ಅಂಬ್ಯುಲೆನ್ಸ ನೀಡಲಾಗಿದೆ. ಇದರಿಂದ ಈ ಭಾಗದ ಸುಮಾರು ಏಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೨೦ಕ್ಕೂ ಹೆಚ್ಚು ಹಳ್ಳಿಯ ಜನರಿಗೆ ಅನುಕೂಲವಾಗಲಿದೆ. ಈ ಭಾಗದ ರೋಗಿಗಳು, ಆಸ್ಪತ್ರೆಗೆ ಬರಲು ಹಾಗೂ ಹೆರಿಗೆಯಾದ ಬಾಣಂತಿಯರಿಗೆ ಮರಳಿ ಅವರ ಗ್ರಾಮಕ್ಕೆ ತಲುಪಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ರಾಂಪುರ ಗ್ರಾ.ಪಂ. ಅಧ್ಯಕ್ಷ ನಾರಾಯಣ ಶಿಲ್ಪಿ, ಸದಸ್ಯ ಹಣಮಂತ ಗುಂಡಗೇರ, ಜಿ.ಪಂ. ಮಾಜಿ ಅಧ್ಯಕ್ಷರಾದ ಬಸವಂತಪ್ಪ ಮೇಟಿ, ಬಾಯಕ್ಕ ಮೇಟಿ, ರೇವಣಸಿದ್ದೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಉಮೇಶ ಮೇಟಿ, ಮುಖಂಡರಾದ ರಮೇಶ ಆಕಳವಾಡಿ, ಬಸವರಾಜ ಕೆಂಜೋಡಿ, ಅಭಿಷೇಕ ಧರ್ಮರ, ಮಲ್ಲು ದ್ಯವಾಣ್ಣವರ ಮುಂತಾದವರು ಉಪಸ್ಥಿತರಿದ್ದರು.

ವೃದ್ಧರಿಗೆ ಊಟ ಬಾಡಿಸಿದ ಮೇಟಿ :
ತಮ್ಮ ೭೮ನೇ ಜನ್ಮದಿನದ ಪ್ರಯುಕ್ತ ಬಾಗಲಕೋಟೆ ನಗರದ ವೃದ್ಧಾಶ್ರಮದಲ್ಲಿ ಹಿರಿಯರಿಗೆ ಊಟ ಮಾಡಿಸುವ ಮೂಲಕ ಜನ್ಮದಿನ ಆಚರಿಸಲಾಯಿತು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಪ್ರಕಾಶ ತಪಶೆಟ್ಟಿ, ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ನಾಗರಾಜ ಹದ್ಲಿ, ನಗರಸಭೆ ಮಾಜಿ ಸದಸ್ಯ ಹನಮಂತ ರಾಕುಂಪಿ, ಭರತ ಈಟಿ, ಹಾಜಿಸಾಬ ದಂಡಿನ, ವಿಜಯಕುಮಾರ ಮುಚಖಂಡಿ, ಬಾಯಕ್ಕ ಮೇಟಿ, ಮಹೇಶ ಗದ್ದನಕೇರಿ, ಶ್ರೀನಿವಾಸ ಬಳ್ಳಾರಿ, ಸಂಜೀವ ವಾಡ್ಕರ, ಚಂದ್ರಶೇಖರ ರಾಠೋಡ, ಗೋವಿಂದ ಬಳ್ಳಾರಿ, ಚಿಟ್ಟು ನೀಲನಾಯಕರ, ಕುತುಬುದ್ದೀನ್ ಖಾಜಿ, ಮಮತಾಜ ಸುತಾರ ಮುಂತಾದವರು ಉಪಸ್ಥಿತರಿದ್ದರು.