ಜಿಲ್ಲೆ

ಅಧಿಕಾರ ವಿಕೇಂದ್ರೀಕರಣಕ್ಕೆ ಭೀಮರಾವ್​ ಕಾರಣ : ಶಾಸಕ ಜಿ.ಬಿ.ಜ್ಯೋತಿಗಣೇಶ್​ ಅಭಿಮತ

ತುಮಕೂರು

ಸಾಮಾಜಿಕ ಅಸಮತೋಲನ, ಅಸಮಾನತೆ ಹೋಗಲಾಡಿಸಲು ಶಿಕ್ಷಣದಿಂದ ಸಾಧ್ಯ ಎಂಬುದನ್ನು ಪ್ರತಿಪಾದಿಸಿದವರು ಸಂವಿಧಾನಶಿಲ್ಪಿ ಡಾ.ಬಿ.ಆರ್​.ಅಂಬೇಡ್ಕರ್​ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​ ಬಣ್ಣಿಸಿದರು.

ನಗರದ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್​. ಅಂಬೇಡ್ಕರ್​ ಅವರ 131ನೇ ಹಾಗೂ ಹಸಿರುಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಅವರ 115ನೇ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರ ವಿಕೇಂದ್ರೀಕರಣ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಇದೆ ಎಂದಾದರೆ ಅದಕ್ಕೆ ಕಾರಣ ಅಂಬೇಡ್ಕರ್​ ಎಂದರು.

ತಾವು ಜೀವನದಲ್ಲಿ ಪಟ್ಟಂತಹ ಕಷ್ಟಗಳನ್ನು ಮೆಟ್ಟಿನಿಂತು ದೇಶಕ್ಕಾಗಿ ಸಾಮಾಜಿಕ ಚಳವಳಿ ಮಾಡಿದಂತಹ ಮಾನವತಾವಾದಿ ಅಂಬೇಡ್ಕರ್​ ಅವರು ಭಾರತದ ಪ್ರಜಾಪ್ರಭುತ್ವದ ಪಿತಾಮಹ ಎನಿಸಿದ್ದಾರೆ. ದೇಶದ ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಬದಲಾಯಿಸಬೇಕೆಂಬುದು ಅಂಬೇಡ್ಕರ್​ ಅವರ ಆಶಯವಾಗಿತ್ತು ಎಂದು ಸ್ಮರಿಸಿದರು.

ಸ್ವರಾಜ್ಯದ ಜತೆಗೆ ಪ್ರಜಾರಾಜ್ಯದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿ, ಪ್ರಜಾರಾಜ್ಯಕ್ಕಾಗಿ ಮೊಟ್ಟ ಮೊದಲಿಗನಾಗಿ ಧ್ವನಿ ಎತ್ತಿದ ಮಹಾನಾಯಕ ಅಂಬೇಡ್ಕರ್​. ಮಹಾನ್​ ರಾಷ್ಟ್ರ ಭಕ್ತರು ಕೂಡ ಆಗಿದ್ದರು. ಜಗತ್ತಿನಾದ್ಯಂತ ಜನಸಾಮಾನ್ಯರು ಹಬ್ಬದ ರೀತಿ ಆಚರಿಸಿ ಸಂಭ್ರಮಿಸುವ ಏಕೈಕ ಹಬ್ಬ ಅದುವೇ ಮಹಾನಾಯಕ ಅಂಬೇಡ್ಕರ್​ ಜಯಂತಿ ಎಂದು ಹೈಕೋರ್ಟ್​ ನ್ಯಾಯವಾದಿ ಪ್ರೊ.ಹರಿರಾಂ ಹೇಳಿದರು.

ಮಹಾನಾಯಕ ಅಂಬೇಡ್ಕರ್​ ಅವರನ್ನು ಒಂದು ಜಾತಿಗೆ ಸೀಮಿತವಾಗಿಸುವ ಪ್ರಯತ್ನ ನಿರಂತರವಾಗಿ ನಡೆದಿದೆ. ಅವರು ಕೇವಲ ಒಂದು ದೇಶ, ಒಂದು ರಾಜ್ಯ, ಒಂದು ಜಾತಿಗೆ ಸೀಮಿತವಲ್ಲ, ಅವರು ವಿಶ್ವ ನಾಯಕ. ದಲಿತ ಪರ ಹೋರಾಟ, ಮೀಸಲಾತಿ ಹೋರಾಟ ಅಲ್ಲದೇ ದೇಶಕ್ಕಾಗಿ ಸಾಮಾಜಿಕ ಚಳುವಳಿ ಮಾಡಿದಂತಹ ಮಹಾನ್​ ನಾಯಕ ಎಂದರು.

ಹಸಿರುಕ್ರಾಂತಿ ಹರಿಕಾರ: ದಲಿತರ, ದಮನಿತರ, ಮಹಿಳೆಯರ ಏಳ್ಗೆಗಾಗಿ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಅವರು ನಿರಂತರವಾಗಿ ಹೋರಾಡಿದ್ದಾರೆ. ಜಾತಿ ಆಧಾರಿತ ಸಾಮಾಜಿಕ, ಆರ್ಥಿಕ, ರಾಜಕೀಯ ಶೋಷಣೆಗಳು ನಿಲ್ಲಬೇಕು. ಎಲ್ಲ ಸಮುದಾಯದವರು ಒಟ್ಟಾಗಿ ಕೆರೆ&ಕಟ್ಟೆ, ದೇವಾಲಯ, ಶಾಲೆಗೆ ಪ್ರವೇಶ ಪಡೆದಾಗ ಸಮಾನತೆ ಸಾಧ್ಯ ಎಂಬುದು ಜಗಜೀವನ ರಾಂ ಅವರ ಆಶಯವಾಗಿತ್ತು ಎಂದು ಸಾಹಿತಿ ಡಾ.ರವಿಕುಮಾರ್​ ನೀಹ ತಿಳಿಸಿದರು.

ಸಾರೋಟ್​ನಲ್ಲಿ ಮೆರವಣಿಗೆ: ಅಂಬೇಡ್ಕರ್​ ಹಾಗೂ ಬಾಬು ಜಗಜೀವನ್​ರಾಂ ಅವರ ಭಾವಚಿತ್ರಗಳ ಮೆರವಣಿಗೆಯನ್ನು ಜಿಲ್ಲಾಧಿಕಾರಿ ಕಚೇರಿಯಿಂದ ಗುಬ್ಬಿ ವೀರಣ್ಣ ರಂಗಮಂದಿರದವರೆಗೆ ಸಾರೋಟ್​ನಲ್ಲಿ ಹಮ್ಮಿಕೊಳ್ಳಲಾಯಿತು.

ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಪೊಲೀಸ್​ ವರಿಷ್ಠಾಧಿಕಾರಿ ರಾಹುಲ್​ಕುಮಾರ್​ ಶಹಪೂರ್​ವಾಡ್​, ಎಡಿಸಿ ಕೆ.ಚನ್ನಬಸಪ್ಪ, ಎಸಿ ವಿ.ಅಜಯ್​, ತಹಸೀಲ್ದಾರ್​ ಜಿ.ವಿ.ಮೋಹನ್​ ಕುಮಾರ್​, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ, ಪಾಲಿಕೆ ಆಯುಕ್ತೆ ರೇಣುಕಾ ಇದ್ದರು.