ಎಚ್.ಡಿ.ಕೋಟೆ: ಗ್ರಾಮ ಪಂಚಾಯಿತಿಗೆ ನೀಡಲಾಗಿರುವ ಅಧಿಕಾರವನ್ನು ವಿಕೇಂದ್ರೀಕರಣ ಮಾಡಬೇಕೇ ಹೊರತು ಮೊಟಕು ಗೊಳಿಸಬಾರದು ಎಂದು ಒತ್ತಾಯಿಸಿ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ತಾಲೂಕು ಘಟಕ ವತಿಯಿಂದ ಗುರುವಾರ ಪ್ರತಿಭಟನೆ ನಡೆಯಿತು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಿಂದ ಮುನ್ನೂರಕ್ಕೂ ಹೆಚ್ಚು ಗ್ರಾಮ ಪಂಚಾಯತಿ ಸದಸ್ಯರು ಮೆರವಣಿಗೆಯಲ್ಲಿ ಸಾಗಿದರು. ಬಳಿಕ ಹುಣಸೂರು-ಬೇಗೂರು ರಸ್ತೆ ಮೂಲಕ ಸಾಗಿ ಮಿನಿ ವಿಧಾನಸೌಧದ ಮುಂಭಾಗ ಸಮಾವೇಶಗೊಂಡರು. ಈ ವೇಳೆ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ನಿಲುವನ್ನು ಖಂಡಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಧಿಕಾರವನ್ನು ಮೊಟಕುಗೊಳಿಸಬಾರದು, ಕೇರಳ ಮಾದರಿಯಲ್ಲಿ ಗೌರವಧನ ಹೆಚ್ಚಳ ಮಾಡಬೇಕು, ನಮ್ಮ ಹಕ್ಕು ನಮಗೆ ಬೇಕು, ಗ್ರಾಮ ಪಂಚಾಯಿತಿ ಸದಸ್ಯರನ್ನು ಅಧಿಕಾರಿಗಳು ಗೌರವದಿಂದ ನಡೆಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಗ್ರಾಪಂ ಅಧ್ಯಕ್ಷರ ಹಾಗೂ ಸದಸ್ಯರ ಹಕ್ಕುಗಳನ್ನು ಮೊಟಕುಗೊಳಿಸುವ ಉದ್ದೇಶದಿಂದ ಅಧಿಕಾರಿಗಳು ಸುಳ್ಳು ವರದಿ ಮಾಡಿ ಸರ್ಕಾರಕ್ಕೆ ಕಳುಹಿಸಿದ್ದಾರೆ. ಸ್ಥಳೀಯ ಸರ್ಕಾರ ತೆಗೆದುಕೊಳ್ಳುವ ತೀರ್ಮಾನವನ್ನು ತಿರಸ್ಕರಿಸುವ ಹಕ್ಕು ಪ್ರಧಾನಿಗೂ ಇಲ್ಲ. ಆದರೆ ಅಧಿಕಾರಿಗಳು ಸಂವಿಧಾನದ 73ನೇ ತಿದ್ದುಪಡಿ ಮುಖಾಂತರ ಗ್ರಾಮ ಪಂಚಾಯಿತಿಗಳ ಅಧಿಕಾರವನ್ನು ಮೊಟಕುಗೊಳಿಸಲು ಉನ್ನಾರ ನಡೆಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಕೆ.ಎಡತೊರೆ ಮಹೇಶ್ ಮಾತನಾಡಿ, ಗ್ರಾಮ ಪಂಚಾಯಿತಿ ಸದಸ್ಯರು ಪಂಚಾಯತ್ ರಾಜ್ ಬಲಪಡಿಸುವ ಮೂಲಕ ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಗೊತ್ತಿರುವ ವಿಚಾರ. ಆದರೆ 2022ರ ಆ.19ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪಾರ ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ 1993 ಪ್ರಕರಣಗಳಿಗೆ ತಿದ್ದುಪಡಿ ಮತ್ತು ಗ್ರಾಮ ಪಂಚಾಯಿತಿ ನೌಕರರ ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಮಾಡಿರುವ ನಡಾವಳಿಗಳು ಸಂವಿಧಾನ ವಿರೋಧಿಯಾಗಿದೆ. ಹಾಗಾಗಿ ಅದನ್ನು ವಾಪಸು ಪಡೆಯಬೇಕು ಎಂದು ಆಗ್ರಹಿಸಿದರು.
ಒತ್ತಾಯಗಳು
ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ನೀಡಿರುವ ಹಣಕಾಸಿನ ಅಧಿಕಾರವನ್ನು ಕಾಯ್ದೆ ವ್ಯಾಪ್ತಿಯೊಳಗೆ ತರಬೇಕು. ಗ್ರಾಪಂ ಸಿಬ್ಬಂದಿ ನೇಮಕಾತಿ ಪ್ರಾಧಿಕಾರ ಗ್ರಾಮ ಪಂಚಾಯಿತಿಯಾಗಿದ್ದು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೀಡಿರುವ ಅಧಿಕಾರವನ್ನು ಕೂಡಲೇ ಕೈಬಿಡಬೇಕು.
ಪಂಚಾಯತ್‌ರಾಜ್ ಕಾಯ್ದೆಗೆ ತಿದ್ದುಪಡಿ ತರುವ ಸಂದರ್ಭ ಒಕ್ಕೂಟದ ಪ್ರತಿನಿಧಿಗಳನ್ನು ಒಳಗೊಂಡು ಸಮನ್ವಯ ಸಮಿತಿ ರಚಿಸಿ ಆ ಮುಖಾಂತರ ಕಾನೂನು ರೂಪಿಸಲು ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯತಿ ಸದಸ್ಯರ ಗೌರವಧನವನ್ನು ಕೇರಳ ರಾಜ್ಯದ ಮಾದರಿಯಲ್ಲಿ ಹೆಚ್ಚಿಸಬೇಕು. ಗ್ರಾಮ ಪಂಚಾಯಿತಿ ಆಡಳಿತದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಹಸ್ತಕ್ಷೇಪ ಮಾಡಬಾರದು.
ನಂತರ ಗ್ರೇಟ್ 2 ತಹಸೀಲ್ದಾರ್ ಸಣ್ಣರಾಮಪ್ಪ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ನಾಗರಾಜು, ಉಪಾಧ್ಯಕ್ಷ ರಂಗಸ್ವಾಮಿ, ಎಚ್.ಡಿ.ಕೋಟೆ ತಾಲೂಕು ಅಧ್ಯಕ್ಷ ಗುರುಸ್ವಾಮಿ, ಸರಗೂರು ಅಧ್ಯಕ್ಷ ಚಂದ್ರಶೇಖರ್, ಕೆಂಡಗಣ್ಣಸ್ವಾಮಿ, ಮಹೇಶ್, ನಂದಕುಮಾರ್, ಲಾವಣ್ಯ, ರಮೇಶ್ ಲಂಕೆ, ಶಿವರಾಜು ಹಾದನೂರು, ಜಕ್ಕಹಳ್ಳಿ ಶಿವಣ್ಣ, ಪ್ರಭಾಕರ್, ನಂದಕುಮಾರ್ ಇದ್ದರು.