ಜಿಲ್ಲೆ

ಅಧಿಕಾರ ನಡೆಸಲು ಅವಕಾಶ ನೀಡುತ್ತಿಲ್ಲ: ನಗರಸಭೆ ಅಧ್ಯಕ್ಷ ಸಿ.ಗಿರೀಶ್ ಅಸಮಾಧಾನ.

ಅರಸೀಕೆರೆ : ದಲಿತ ಸಮುದಾಯಕ್ಕೆ ಸೇರಿದ ನನಗೆ ಕೆಲ ಜೆಡಿಎಸ್ ಸದಸ್ಯರು ಬಹುಮತದ ಹೆಸರಿನಲ್ಲಿ ಅಧಿಕಾರ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ನಗರಸಭೆ ಅಧ್ಯಕ್ಷ ಸಿ.ಗಿರೀಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಾಮಾನ್ಯ ಸಭೆ ಮುಕ್ತಾಯಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಕುಡಿಯುವ ನೀರು ಪೂರೈಸುವ ಶುದ್ದೀಕರಣ ಘಟಕ ನಿಷ್ಕ್ರಿಯಗೊಂಡು ಐದಾರು ವರ್ಷಗಳೇ ಕಳೆದಿವೆ . ಬೃಹತ್ ನೀರು ಸಂಗ್ರಹಗಾರ ತೊಟ್ಟಿಯಲ್ಲಿ ಕಸ, ಕಡ್ಡಿ ತುಂಬಿದ್ದು ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ.ಜತೆಗೆ ಹದಿನೈದನೇ ಹಣಕಾಸು ಯೋಜನೆಯಡಿ ಅಗತ್ಯ ಅನುದಾನ ಕೂಡ ಮೀಸಲಿರಿಸಲಾಗಿದೆ. ಜನರ ಆರೋಗ್ಯ ಕಾಪಾಡುವ ಹೊಣೆಗಾರಿಕೆ ಅರಿತು ಕರೆಯಲಾಗಿದ್ದ ಸಾಮಾನ್ಯ ಸಭೆಗೆ ಬಹುಮತದ ಹೆಸರಿನಲ್ಲಿ ಸ್ಥಾಯಿ ಸಮಿತಿ ರಚನೆ ವಿಚಾರ ಮುಂದಿಟ್ಟು ಕೆಲ ಜೆಡಿಎಸ್ ಸದಸ್ಯರು ದಲಿತ ಸಮುದಾಯಕ್ಕೆ ಸೇರಿದವನು ಎನ್ನುವ ಕಾರಣಕ್ಕೆ ಪದೇ ಪದೆ ಅಡ್ಡಿಪಡಿಸುತ್ತಿದ್ದಾರೆ. ಅಶುದ್ಧ ಕುಡಿಯುವ ನೀರು ಪೂರೈಕೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾದಲ್ಲಿ ಅದರ ಪ್ರತಿಫಲ ಅನುಭವಿಸಬೇಕಾಗುತ್ತದೆ ಎಂದು ಕಿಡಿಕಾರಿದರು.

ಟೆಂಡರ್: ನಗರೋತ್ಥಾನ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದದಿಂದ 30 ಕೋಟಿ ರೂ.ಅನುದಾನ ನಿಗದಿಯಾಗಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ತಾಂತ್ರಿಕ ಬಿಡ್ ತೆರವುಗೊಂಡ ಕೂಡಲೇ ನಗರದ 31 ವಾರ್ಡ್‌ಗಳಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗುವುದು.ರಾಜಕಾರಣದ ಸಮಯ ಬಂದಾಗ ಹೋರಾಟ ಮಾಡೋಣ. ಸದ್ಯ ಜನರ ಜ್ವಲಂತ ಸಮಸ್ಯೆ ಪರಿಹರಿಸಲು ನಮ್ಮೊಂದಿಗೆ ಸಹಕರಿಸಿ ಎಂದು ಹೇಳಿದರು.ಮುಖಂಡರಾದ ರಮೇಶ್ ನಾಯ್ಡು, ಶಿವನ್‌ರಾಜ್ ಇದ್ದರು.