ಜಿಲ್ಲೆ

ಅಧಿಕಾರ ಇರುವುದು ಜನರ ಸೇವೆಗಾಗಿ

ಹುಕ್ಕೇರಿ: ಪುರಸಭೆ ಅಧಿಕಾರಿಗಳು ರೇರಾ ಕಾಯ್ದೆ ಗಾಳಿಗೆ ತೂರಿ ಅನಽಕೃತ ನಿವೇಶನಗಳ ಮಾಲೀಕರಿಗೆ ಉತಾರ ನೀಡಿದ್ದಾರೆ. ಇದರಿಂದ ಸಾರ್ವಜನಿಕರು ಮೋಸ ಹೋಗುತ್ತಿದ್ದು, ಮೂಲಸೌಲಭ್ಯಗಳಿಗೆ ಪುರಸಭೆಗೆ ಅಲೆದಾಡುವಂತಾಗಿದೆ ಎಂದು ಮುಖಂಡರು ಮತ್ತು ಪುರಸಭೆ ಕೆಲ ಸದಸ್ಯರು ಆರೋಪಿಸಿದರು.

ಸ್ಥಳೀಯ ಪುರಸಭೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಅಧಿಕಾರ ಇರುವುದು ಜನರ ಸೇವೆಗಾಗಿ ಹೊರತು ಕಾಡುವುದಕ್ಕಲ್ಲವೆಂಬ ಮನೋಭಾವದಿಂದ ಕರ್ತವ್ಯ ನಿಭಾಯಿಸಬೇಕು. ಜನರ ಎಲ್ಲ ಅಹವಾಲು ಮತ್ತು ನ್ಯಾಯಾಲಯದ ವ್ಯಾಜ್ಯಗಳ ಮಾಹಿತಿಯನ್ನು ವಾರದೊಳಗಾಗಿ ತಮಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅನಧಿಕೃತ ನಿವೇಶನ, ರೇರಾ ಕಾಯ್ದೆ ಉಲ್ಲಂಘಿಸಿದವರಿಗೆ ನೋಟಿಸ್ ಕೊಟ್ಟು ಅವುಗಳ ಪರವಾನಗಿ ರದ್ದುಗೊಳಿಸಲು ಆದೇಶಿಸಿದರು. ಕೊಳಚೆ ಪ್ರದೇಶದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಿಸುತ್ತಿರುವುದು ಮೂರ್ಖತನ. ಈಗ ಇದನ್ನು ತಡೆ ಹಿಡಿಯಲು ಬರುವುದಿಲ್ಲ. ಕಾರಣ ಕೊಳಚೆ ಪ್ರದೇಶ ಸ್ವಚ್ಛಗೊಳಿಸಿ ತರಕಾರಿ ಮಾರುಕಟ್ಟೆ ಮಳಿಗೆ ನಿರ್ಮಿಸಬೇಕು ಎಂದರು.

ಕೋರ್ಟ್ ವೃತ್ತದ ಬಳಿಯ ಬೆಳವಿ ರಸ್ತೆ ಅತಿಕ್ರಮಣ ಮತ್ತು ಅದರಲ್ಲಿ ನಿರ್ಮಿಸಿದ ವಾಣಿಜ್ಯ ಮಳಿಗೆಗಳ ತೆರವುಗೊಳಸಲು ಪುರಸಭೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಮೌನೇಶ ಪೋತದಾರ ಮತ್ತು ಸೋಮಶೇಖರ ಮಠಪತಿ ಆರೋಪಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ರವದಿ, ಮುಖಂಡರಾದ ರವಿ ಕರಾಳೆ, ತಮ್ಮಣ್ಣಗೌಡ ಪಾಟೀಲ, ಚಂದ್ರಶೇಖರ ಗಂಗಣ್ಣವರ ಮೊದಲಾದವರು ಮಾತನಾಡಿ, ಪುರಸಭೆ ಅಧಿಕಾರಿಗಳು ಕಟ್ಟಡಗಳ ನಿರ್ಮಾಣಕ್ಕೆ ಪರವಾನಗಿ ಕೊಡುವಾಗ ಸ್ಥಳ ವೀಕ್ಷಿಸದೆ ಕಾರ್ಯಾಲಯದಲ್ಲಿಯೇ ಕುಳಿತು ಆದೇಶ ಪತ್ರ ನೀಡುತ್ತಾರೆ. ಇದರಿಂದ ಇಂತಹ ಸಮಸ್ಯೆ ಉದ್ಭವಿಸಿವೆ. ಪಟ್ಟಣದಲ್ಲಿ ಅನಧಿಕೃತ ನಳ ಸಂಪರ್ಕ ಬಹಳಷ್ಟಿವೆ. ಸರ್ವೇ ನಂ.೧೧೬ರ ನಿವೇಶನ ಸೇರಿ ಹಲವಾರು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಅವುಗಳಿಗೆ ಸರಿಯಾಗಿ ಸ್ಪಂದಿಸದಿರುವುದರಿಂದ ವ್ಯಾಜ್ಯಗಳಿಗೆ ಪರಿಹಾರ ದೊರಕುತ್ತಿಲ್ಲ. ಈಗಾಗಲೇ ಅನಽಕೃತ ಕಟ್ಟಡಗಳಿಗೆ ನಳ, ವಿದ್ಯುತ್ ಸೇರಿ ಇತರ ಸೌಲಭ್ಯ ಪಡೆದುಕೊಂಡ ಅಲ್ಲಿಯ ನಿವಾಸಿಗಳು ತೆರಿಗೆ ತುಂಬಿಲ್ಲ. ಇದರಿಂದ ಪುರಸಭೆಗೆ ಕೋಟ್ಯಂತರ ರೂ. ಆದಾಯ ತಪ್ಪಿದೆ ಎಂದು ಆರೋಪಿಸಿದರು.

ಪುರಸಭೆ ಅಧ್ಯಕ್ಷ ಇಮ್ರಾನ್ ಮೋಮಿನ್, ಉಪಾಧ್ಯಕ್ಷೆ ಜ್ಯೋತಿ ಬಡಿಗೇರ, ಸದಸ್ಯರಾದ ಮಹಾವೀರ ನಿಲಜಗಿ, ಸದಾಶಿವ ಕರೆಪ್ಪಗೋಳ, ರಾಜು ಮುನ್ನೋಳಿ, ರೇಖಾ ಚಿಕ್ಕೋಡಿ, ಸುರೇಖಾ ಗಳತಗಿಮಠ ಇತರರಿದ್ದರು. ಗೀತಾ ಕಾಗತೀಕರ ಸ್ವಾಗತಿಸಿದರು. ಮುಖ್ಯಾಧಿಕಾರಿ ಈಶ್ವರ ಸಿದ್ನಾಳ ನಿರೂಪಿಸಿದರು. ಅಭಿಯಂತ ರಾಜಶೇಖರ ಪಟ್ಟಣಶೆಟ್ಟಿ ವಂದಿಸಿದರು.