ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರಸ್ತುತ ಭಾರತವು ಅತ್ಯಧಿಕ ಪ್ರಮಾಣದ ಅಡಿಗೆ ಎಣ್ಣೆ ಆಮದು ಮಾಡಿಕೊಳ್ಳುತ್ತಿದ್ದು, ಇದನ್ನು ತಪ್ಪಿಸಿ ದೇಶವು ಸ್ವಾವಲಂಬನೆ ಸಾಧಿಸಲು ಅಧಿಕ ಪ್ರಮಾಣದ ಕುಸುಬೆ ಬೆಳೆಯಲು ಮುಂದಾಗಬೇಕು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.ಕೃಷಿ ವಿಶ್ವ ವಿದ್ಯಾಲಯ ಹಾಗೂ ಜೀರಿಗವಾಡದ ಫಾರ್ಮರ್ಸ್ ಪ್ರೊಡ್ಯೂಸರ್ಸ್ ಕಂಪನಿ ವತಿಯಿಂದ ನಗರದ ಕೃವಿವಿಯಲ್ಲಿ ಏರ್ಪಡಿಸಿದ್ದ ಕೃಷಿ ಮತ್ತು ಕುಸುಬೆ ಎಣ್ಣೆಕಾಳು ಬೆಳೆ ಕುರಿತ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಕಡಿಮೆ ಬೆಲೆಗೆ ಸಿಗುವ ಅಡಿಗೆ ಎಣ್ಣೆ ಮನುಷ್ಯನ ಆರೋಗ್ಯಕ್ಕೆ ಪೂರಕವಾಗಿಲ್ಲ. ಹೀಗಾಗಿ ಹಳೇ ಪದ್ಧತಿಯಂತೆ ಗಾಣಗಳ ಮೂಲಕ ಉತ್ಪಾದಿಸಿದ ಕುಸುಬೆ ಎಣ್ಣೆ ಬಳಸುವ ವಿಚಾರ ಎಲ್ಲರಲ್ಲಿದೆ. ಸುಧಾರಿತ ಕೃಷಿ ವಿಜ್ಞಾನದ ವಿಚಾರಗಳನ್ನು ಅರಿತು ಸಮಸ್ತ ರೈತ ಬಾಂಧವರು ಹೆಚ್ಚೆಚ್ಚು ಕುಸುಬೆ ಬೆಳೆಯಲು ಮುಂದಾಗಬೇಕು ಎಂದರು.ಶಶಿಮೌಳಿ ಕುಲಕರ್ಣಿ ಮಾತನಾಡಿ, ಕುಸುಬೆ ಒಂದು ಅತ್ಯುತ್ತಮ ಎಣ್ಣೆಕಾಳು ವ್ಯಾಪಕವಾಗಿ ಸ್ವೀಕೃತಿಯಾಗಿದ್ದು, ಈಗ ಎಲ್ಲೆಡೆ ಕುಸುಬೆ ಬೇಸಾಯಕ್ಕೆ ಒತ್ತು ನೀಡಬೇಕಿದೆ. ಪ್ರಸ್ತುತ ರೈತರು ಯಂತ್ರಗಳ ಮೂಲಕ ಬಹಳ ಸುಲಭವಾಗಿ ಕುಸುಬೆ ಒಕ್ಕಲು ಮಾಡಬಹುದಾಗಿದೆ ಎಂದರು.ವಿದ್ಯಾ ವಿ.ಎಂ. ಮಾತನಾಡಿ, ಕೇಂದ್ರ ಸರ್ಕಾರದ ಮುದ್ರಾ ಯೋಜನೆ ಅಡಿ ಎಣ್ಣೆ ತೆಗೆಯುವ ಯಂತ್ರಗಳ ಖರೀದಿಗೆ ಅವಕಾಶವಿದ್ದು, ಮತ್ತೆ ಮೊದಲಿನಂತೆ ಎಣ್ಣೆ ಗಾಣದ ಉದ್ಯೋಗ ಮುನ್ನೆಲೆಗೆ ಬರಬೇಕು. ನಮ್ಮ ರೈತರು ಅತ್ಯಧಿಕ ಪ್ರಮಾಣದ ಕುಸುಬೆ ಬೆಳೆಯಲು ಆರಂಭಿಸಿದರೆ ದೇಶ ಪ್ರತಿ ವರ್ಷ ಮಾಡಿಕೊಳ್ಳುವ 14 ಮಿಲಿಯನ್ ಟನ್ ಖಾದ್ಯ ತೈಲ ಆಮದು ನಿಲ್ಲುತ್ತದೆ. ಕುಸುಬೆ ಬೀಜಗಳ ಉಳಿವಿಗೆ ಕೇಂದ್ರ ಸರ್ಕಾರ ಪ್ರತಿ ವರ್ಷ ಅ. 1ರಂದು ರಾಷ್ಟ್ರೀಯ ಕುಸುಬೆ ದಿನ ಎಂದು ಘೋಷಿಸುವಂತೆ ಆಗ್ರಹಿಸಿದರು.ಕೃಷಿ ವಿವಿ ಕುಲಪತಿ ಡಾ.ಪಿ.ಎಲ್. ಪಾಟೀಲ, ಕೃಷಿ ವಿವಿ ಪ್ರಾಧ್ಯಾಪಕರಾದ ಡಾ.ಸುನೀಲ ಹಳಕಟ್ಟಿ, ಡಾ. ಸಿ.ಎಂ. ರಫಿ, ಗ್ರಾಪಂ ಸದಸ್ಯ ಪ್ರಭಾಕರ ದೇಶಪಾಂಡೆ, ಬಸವರಾಜ ಕುಂದಗೋಳಮಠ,ಇತರರು ಇದ್ದರು.