ರಾಜು ಹೊಸಮನಿ ನರಗುಂದ
ಈತ ತಾಲೂಕಿನ ಕೊಣ್ಣೂರಿನ ಕೆಇಎಸ್ ಪಿಯು ಕಾಲೇಜ್ನ ವಿದ್ಯಾರ್ಥಿ. ಕಾಲೇಜಿಗೇ ಟಾಪರ್. ಆದರೆ, ಇಂಗ್ಲಿಷ್ ವಿಷಯದಲ್ಲಿ ಉತ್ತೀರ್ಣವಾಗಲು ಬೇಕಾದ ಅಂಕ ಗಳಿಸಿದ್ದರೂ ಈಗ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಈತ ಫೇಲ್ ಎಂದು ಘೊಷಿಸಲಾಗಿದೆ. ಪಿಯು ಮಂಡಳಿಯ ಎಡವಟ್ಟಿನಿಂದಾಗಿ ಈತನ ಭವಿಷ್ಯ ಆತಂಕಕ್ಕೆ ಸಿಲುಕಿದೆ.
ಈ ವಿದ್ಯಾರ್ಥಿಯ ಹೆಸರು ಶಬ್ಬೀರ್ ಖಾಜಾಮೀರ ಖಾಜಿ. ಕಳೆದ ಮಾರ್ಚ್, ಜೂನ್ನಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕಾಲೇಜಿಗೆ ಅತ್ಯಧಿಕ ಅಂಕ ಗಳಿಸಿದ್ದಾನೆ. ಆದರೂ ಪಿಯುಸಿ ಪರೀಕ್ಷಾ ಮಂಡಳಿಯು ಈತನನ್ನು ಅನುತ್ತೀರ್ಣ ಮಾಡಿದೆ.
ಕನ್ನಡದಲ್ಲಿ 92, ಇತಿಹಾಸದಲ್ಲಿ 94, ಅರ್ಥಶಾಸ್ತ್ರದಲ್ಲಿ 98, ಸಮಾಜಶಾಸ್ತ್ರದಲ್ಲಿ 90, ರಾಜ್ಯಶಾಸ್ತ್ರದಲ್ಲಿ 96 ಅಂಕಗಳನ್ನು ಈತ ಪಡೆದಿದ್ದಾನೆ. ಆದರೆ, ಇಂಗ್ಲಿಷ್ ವಿಷಯದಲ್ಲಿ ಕೇವಲ 24 ಅಂಕಗಳನ್ನು ನೀಡಿ ಅನುತ್ತೀರ್ಣಗೊಳಿಸಲಾಗಿದೆ. ಈ ಫಲಿತಾಂಶದಿಂದ ಸಂಶಯಗೊಂಡ ಶಬ್ಬೀರ್, ಸಾಲ ಮಾಡಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ. ಉತ್ತರ ಪತ್ರಿಕೆ ಪಡೆದುಕೊಂಡಾಗ ಸ್ಕ್ಯಾನ್ ಫೋಟೋ ಕಾಪಿಯಲ್ಲಿ 56 ಅಂಕಗಳನ್ನು ಗಳಿಸಿರುವುದು ಬೆಳಕಿಗೆ ಬಂದಿದೆ. ಆದರೆ, ಆಗಸ್ಟ್ 28ರಂದು ಪ್ರಕಟಗೊಂಡ ಮರು ಮೌಲ್ಯಮಾಪನದ ಫಲಿತಾಂಶ ಪಟ್ಟಿಯಲ್ಲೂ 24 ಅಂಕಗಳನ್ನಷ್ಟೇ ಪಿಯು ಮಂಡಳಿ ನೀಡಿ ಅನುತ್ತೀರ್ಣಗೊಳಿಸಿದೆ. ‘ಎರಡು ಬಾರಿಯ ಫಲಿತಾಂಶ ಪ್ರಕಟಣೆ ವೇಳೆ ಪಿಯು ಮಂಡಳಿಯ ನಿಷ್ಕಾಳಜಿಯಿಂದ ನನ್ನ ಭವಿಷ್ಯ ಮಣ್ಣು ಪಾಲಾಗಿದೆ. ಈ ಕುರಿತು ಗದಗ ಡಿಡಿ ಅವರಿಂದ ಹಿಡಿದು ಬೆಂಗಳೂರಿನ ಎಲ್ಲ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ’ ಎಂದು ನೊಂದ ವಿದ್ಯಾರ್ಥಿ ಶಬ್ಬೀರ ‘ವಿಜಯವಾಣಿ’ ಮುಂದೆ ತಮ್ಮ ಅಳಲು ತೋಡಿಕೊಂಡರು.
ದ್ವಿತೀಯ ಪಿಯುಸಿ ಪರೀಕ್ಷೆಯ ಎಲ್ಲ ವಿಷಯಗಳಲ್ಲೂ ನಾನು ಪಾಸ್ ಆಗಿದ್ದೇನೆ. ಆದರೆ, ಎರಡು ಬಾರಿ ಪ್ರಕಟಗೊಂಡಿರುವ ಫಲಿತಾಂಶದ ಪಟ್ಟಿಯಲ್ಲಿ ನನ್ನನ್ನು ಫೇಲ್ ಮಾಡಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಎಲ್ಲ ಅಧಿಕಾರಿ, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ವ್ಯಾಸಂಗದ ಪ್ರವೇಶಾತಿಗೆ ಆ. 31 ಕೊನೆಯ ದಿನವಾಗಿತ್ತು. ಆದರೀಗ ಅದು ಕೂಡ ಮುಗಿದು ಹೋಗಿದೆ. ನನಗೆ ಭವಿಷ್ಯದ ಚಿಂತೆ ಕಾಡುತ್ತಿದೆ. ಪತ್ರಿಕೆಯಿಂದಾದರೂ ನನಗೆ ನ್ಯಾಯ ದೊರಕಲಿ.| ಶಬ್ಬೀರ ಖಾಜಿ ವಿದ್ಯಾರ್ಥಿ
ಕೊಣ್ಣೂರಿನ ವಿದ್ಯಾರ್ಥಿಯ ಎಲ್ಲ ದಾಖಲಾತಿಗಳನ್ನು ಎರಡ್ಮೂರು ದಿನಗಳಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ವಾಟ್ಸಾಪ್, ಇ-ಮೇಲ್ ಮೂಲಕ ಕಳುಹಿಸಲಾಗಿದೆ. ಪ.ಪೂ. ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ರಸಾದ ಅವರು ಗುರುವಾರದೊಳಗೆ ಸರಿಪಡಿಸುವ ಭರವಸೆ ನೀಡಿದ್ದಾರೆ. ಯಾವುದಕ್ಕೂ ಕೊಣ್ಣೂರಿನ ಕೆಇಎಸ್ ಕಾಲೇಜ್ನ ಪ್ರಾಚಾರ್ಯ ಶ್ರೀಕಾಂತ ಜೋಶಿ ಅವರಿಗೆ ಬೆಂಗಳೂರಿಗೆ ಹೋಗಿ ಈ ವಿದ್ಯಾರ್ಥಿಯ ಸಮಸ್ಯೆ ಸರಿಪಡಿಸಿಕೊಂಡು ಬರುವಂತೆ ಸೂಚಿಸಿದ್ದೇನೆ.| ಪಿ. ಜಯಪ್ಪ ಗದಗ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು