ಭದ್ರಾವತಿ: ಶಿವಾಜಿ ಮಹಾರಾಜರು ಕೇವಲ ಹಿಂದು ಧರ್ಮಕ್ಕೆ ಸೀಮಿತವಾಗದೆ ಸಮಸ್ತ ಜೀವರಾಶಿಗಳ ಹಿತದೃಷ್ಟಿಯಿಂದ ಕೆಲಸ ಮಾಡಿದಂಥವರು ಎಂದು ಬೆಂಗಳೂರು ಶ್ರೀ ಗೋಸಾಯಿ ಮಹಾ ಸಂಸ್ಥಾನ ಮಠದ ಶ್ರೀ ಮಂಜುನಾಥ ಸ್ವಾಮೀಜಿ ಹೇಳಿದರು.
ನಗರದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಛತ್ರಪತಿ ಶಿವಾಜಿ ಸೇವಾ ಸಂಘ ಜಂಟಿಯಾಗಿ ಶುಕ್ರವಾರ ಆಯೋಜಿಸಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 393ನೇ ಜಯಂತ್ಯುತ್ಸವದಲ್ಲಿ ಆಶೀರ್ವಚನ ನೀಡಿ, ಶಿವಾಜಿ ಮಹಾರಾಜರು ಅಧರ್ಮದ ವಿರುದ್ಧ ಹೋರಾಟ ಮಾಡಿದ್ದರೆ ಹೊರತು ಜಾತಿವಾದಿಯಾಗಿ ಕೆಲಸ ಮಾಡಲಿಲ್ಲ ಎಂದರು.
ಹಿಂದು ಸ್ವರಾಜ್ಯ ಸ್ಥಾಪನೆಗಾಗಿ ಹೊರಟ ಶಿವಾಜಿ ಮಹಾರಾಜರ ಪರಿವಾರದಲ್ಲಿ ಹಿಂದುಗಳಷ್ಟೇ ಅಲ್ಲದೆ 60 ಸಾವಿರ ಮುಸಲ್ಮಾನರೂ ಇದ್ದರು. ಇದರಿಂದಾಗಿ ಜಾತಿ, ಭಾಷೆ, ಸಂಪ್ರದಾಯವಾದ ಸೇರಿ ಯಾವುದೇ ವಾದಗಳಲ್ಲಿ ಸಿಲುಕಿಕೊಂಡವರಲ್ಲ ಎಂಬುದು ಸ್ಪಷ್ಟ ಎಂದು ತಿಳಿಸಿದರು.
ಭಾರತ ದೇಶ ಅನೇಕ ಋಷಿಮುನಿಗಳು, ಸನ್ಯಾಸಿಗಳು, ತಪಸ್ವಿಗಳನ್ನು ಕೊಟ್ಟಿರುವ ದೇಶ. ಅಷ್ಟೇ ಅಲ್ಲದೆ ಶಂಕರಾಚಾರ್ಯರಿಂದ ಹಿಡಿದು ಮಧ್ವಾಚಾರ್ಯರಂತಹ ಆಚಾರ್ಯರನ್ನು ಬಸವಣ್ಣನವರಂತಹ ಶರಣರನ್ನು ಕೊಟ್ಟಿದೆ. ಛತ್ರಪತಿ ಶಿವಾಜಿ ಮಹಾರಾಜರಂತಹ ದೇಶಭಕ್ತರನ್ನು ಕೊಟ್ಟಿರುವ ಭಾರತ ದೇಶದಲ್ಲಿ ನಾವು ಜನ್ಮ ತಾಳಿರುವುದೇ ಪುಣ್ಯ ಎಂದು ಹೇಳಿದರು.
ಮಕ್ಕಳಿಗೆ ಜನ್ಮಕೊಟ್ಟು ಶಾಲೆಗೆ ಕಳುಹಿಸಿದೇ ದೊಡ್ಡ ಸಾಧನೆಯಲ್ಲ. ಅವರಿಗೆ ಸಂಸ್ಕಾರ ಕಲಿಸುವುದು ಪಾಲಕರ ಹೊಣೆ. ಶಿವಾಜಿ ಮಹಾರಾಜರಿಗೆ ತಾಯಿ ಜೀಜಾಬಾಯಿ ಹೇಳಿಕೊಟ್ಟ ಧರ್ಮ ಮಾರ್ಗಗಳು ಅವರನ್ನು ಸಂಸ್ಕಾರವಂತರನ್ನಾಗಿ ಮಾಡಿದವು. ಹೀಗಾಗಿ ಸ್ವರಾಜ್ಯ ಕಟ್ಟಲು ಸಾಧ್ಯವಾಯಿತು. ಆ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರೂ ಜೀಜಾಬಾಯಿಯಂತೆ ಆಗಬೇಕೆಂದು ಸಲಹೆ ನೀಡಿದರು.
ಮೆರವಣಿಗೆಗೆ ಚಾಲನೆ ಶಾಸಕ ಬಿ.ಕೆ.ಸಂಗಮೇಶ್ವರ್ ನೀಡಿ ಮಾತನಾಡಿದ ಶಾಸಕ ಬಿ.ಕೆ.ಸಂಗಮೇಶ್ವರ್,ಛತ್ರಪತಿ ಶಿವಾಜಿ ಮಹಾರಾಜರು ಬ್ರಿಟಿಷರ ವಿರುದ್ಧ ಹೋರಾಡಿದ ಧೀಮಂತ ನಾಯಕ. ಇವರ ಆದರ್ಶಗಳನ್ನು ಯುವ ಸಮುದಾಯಕ್ಕೆ ತಿಳಿಸುವ ಕೆಲಸ ಆಗಬೇಕಿದೆ. ಬಾಲ್ಯದಲ್ಲಿಯೆ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ತಿಳಿಸುವುದರಿಂದ ಮಕ್ಕಳಲ್ಲಿ ದೇಶಪ್ರೇಮ ಬೆಳೆಯಲು ಸಾಧ್ಯ ಎಂದರು.
ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಮಾತನಾಡಿ, ಶಿವಾಜಿ ಕೇವಲ ಮರಾಠ ಸಮಾಜಕ್ಕೆ ಸೀಮಿತವಲ್ಲ. ಎಲ್ಲ ಸಮುದಾಯಕ್ಕೂ ಸೇರಿದವರಾಗಿದ್ದಾರೆ. ದೇಶ, ರಾಜ್ಯಕ್ಕೆ ಅವರ ಕೊಡುಗೆ ಅಪಾರ. ಇಲ್ಲಿನ ಮರಾಠ ಸಮಾಜವನ್ನು ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದ ಹಲವು ಗಣ್ಯರನ್ನು ಇಂದು ನೆನಪು ಮಾಡಿಕೊಳ್ಳಬೇಕಾಗಿದೆ. ಸಮಾಜದ ಏಳ್ಗೆಗೆ ಯುವ ಸಮುದಾಯ ಶ್ರಮಿಸಬೇಕೆಂದು ಸಲಹೆ ನೀಡಿದರು.
ಮೆರವಣಿಗೆಗೆ ಮೆರುಗು ನೀಡಿದ ಕಲಾತಂಡ: ಛತ್ರಪತಿ ಶಿವಾಜಿ ಮಹಾರಾಜರ 393ನೇ ಜಯಂತ್ಯುತ್ಸವ ಹಿನ್ನಲೆಯಲ್ಲಿ ಆಯೋಜಿಸಿದ್ದ ಬೃಹತ್ ಮೆರವಣಿಗೆಗೆ ಇದೇ ಪ್ರಥಮ ಬಾರಿಗೆ ಮಹಾರಾಷ್ಟ್ರದ ನಾಸಿಕ್ ಸೇರಿ ಇನ್ನಿತರೆ ಕಡೆಗಳಿಂದ ಪುರುಷ ಹಾಗೂ ಮಹಿಳೆಯರ ಡೊಳ್ಳು ಕುಣಿತದ ತಂಡಗಳನ್ನು ಕರೆಸಲಾಗಿತ್ತು. ಜಾನಪದ ಕಲಾ ತಂಡಗಳ ಕುಣಿತ ಗಮನ ಸೆಳೆದವು. ಹಾಲಿ ಮತ್ತು ಮಾಜಿ ಶಾಸಕರು ಮರಾಠ ಸಮಾಜದ ಪೇಟ ಧರಿಸಿ ಮೆರವಣಿಗೆ ಉದ್ದಕ್ಕೂ ಹೆಜ್ಜೆ ಹಾಕಿದರು. ಅವರೊಂದಿಗೆ ತಾಪಂ, ಜಿಪಂ ಸದಸ್ಯರು, ಸಮಾಜದ ಮುಖಂಡರು, ಮಹಿಳೆಯರು, ಯುವಕ, ಯುವತಿಯರು ಪಾಲ್ಗೊಂಡಿದ್ದರು.
ಯಶವಂತರಾವ್ಘೊರ್ಪಡೆ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಮಣಿಶೇಖರ್, ಎಪಿಎಂಸಿ ಅಧ್ಯಕ್ಷ ಲವೇಶ್ಗೌಡ, ತಾಪಂ ಅಧ್ಯಕ್ಷೆ ಆಶಾ ಶ್ರೀಧರ್, ಉಪಾಧ್ಯಕ್ಷೆ ಸರೋಜಮ್ಮ ಹಾಜ್ಯಾನಾಯ್್ಕತಿಪ್ಪೇಶ್ರಾವ್, ಪ್ರೇಮ್ುಮಾರ್, ತಹಸೀಲ್ದಾರ್ ಸೋಮಶೇಖರ್, ಎಸ್.ಕುಮಾರ್, ಡಾ.ನಾಗೇಶ್, ಸಮಾಜದ ಮುಖಂಡರಾದ ಶಿವಾಜಿರಾವ್ ಗಾಯಕ್ವಾಡ್, ಪ್ರಕಾಶ್ರಾವ್ ದುರೆ, ಸಚಿನ್ ಎಸ್.ಸಿಂಧ್ಯಾ, ವಿಶ್ವೇಶ್ವರರಾವ್ ಗಾಯಕ್ವಾಡ್, ವಿಶ್ವನಾಥ್ರಾವ್, ಸಂಪತ್ಕುಮಾರ್, ಬಿ.ಕೆ.ಶಿವಕುಮಾರ್, ಶಿವಾಜಿರಾವ್ ಡಿಸ್ಲೇ, ರಮಾನಾಥ್ ಬರ್ಗೆ, ಹೇಮಾವತಿ ವಿಶ್ವನಾಥ್ ಇತರರಿದ್ದರು.