ಬಾಗಲಕೋಟೆ: ನಗರದ ನವನಗರ ರಸ್ತೆಯಲ್ಲಿರುವ ಶ್ರೀದಿಗಂಬರೇಶ್ವರ ಮಠದ ಮಹಾರಥೋತ್ಸವವು ಶುಕ್ರವಾರ ಸಂಜೆ ಅದ್ಧೂರಿಯಾಗಿ ಜರುಗಿತು.
ಶ್ರೀಮಠದ ಮುಂಭಾಗವಿರುವ ಕೆಂಪು ರಸ್ತೆಯಲ್ಲಿ ರಥೋತ್ಸವ ಜರುಗಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಪುನಿತರಾದರು.
ಸಂಜೆ ೫ ಗಂಟೆ ವೇಳೆಗೆ ಶ್ರೀದಿಗಂಬರೇಶ್ವರ, ಶ್ರೀಮಾತಾ ಕಪ್ಪರ ಪಡಿಯಮ್ಮನವರ ಉತ್ಸವ ಮೂರ್ತಿಗಳಿಗೆ, ತೇರಿನ ಕಳಸಕ್ಕೆ ಪೂಜೆ ಸಲ್ಲಿಸಿ, ತೇರಿನ ಕಳಸದ ಪ್ರತಿಷ್ಠಾಪನೆಯೊಂದಿಗೆ ೯ನೇ ವರ್ಷದ ಮಹಾರಥೋತ್ಸವ ಜರುಗಿತು. ಶ್ರೀಬಸವರಾಜಪ್ಪನವರ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಗರಾಳದ ಶ್ರೀಶೇಷಪ್ಪಯ್ಯ ಸ್ವಾಮೀಜಿ ಸೇರಿದಂತೆ ಗಣ್ಯರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಶ್ರೀಬಸಪ್ಪಜ್ಜನವರ ಕುರಿತಾದ ಗ್ರಂಥಲೋಕಾರ್ಪಣೆಗೊಳಿಸಲಾಯಿತು.
ಜಾತ್ರಾಮಹೋತ್ಸವದ ಅಂಗವಾಗಿ ಗುರುವಾರ ರಾತ್ರಿ ಟಗರಿನ ಕಾಳಗ ಜರುಗಿತು. ತೀವ್ರ ಜಿದ್ದಾಜದ್ದಿನ ಕಣದಲ್ಲಿ ಟಗರಗಳು ಸೆಣೆಸಾಡಿದವು, ಭಾರೀ ಸಂಖ್ಯೆಯಲ್ಲಿ ಜನ ಕಾಳಗ ವೀಕ್ಷಿಸಲು ಆಗಮಿಸಿದ್ದರು. ಪ್ರಥಮ ಬಹುಮಾನವಾಗಿ ೫೦ ಸಾವಿರ, ದ್ವಿತೀಯ ಬಹುಮಾನವಾಗಿ ೩೦ ಸಾವಿರ, ತೃತೀಯ ಬಹುಮಾನವಾಗಿ ೨೦ ಸಾವಿರ ಹಾಗೂ ಚತುರ್ಥ ಬಹುಮಾನವಾಗಿ ೧೦ ಸಾವಿರ ರೂ.ಗಳ ಬಹುಮಾನ ನೀಡಲಾಯಿತು.