ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀಗುರು ರಾಯರ 352ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ದಿನವಾದ ಶನಿವಾರ ಮಂಗಳವಾದ್ಯಗಳ ನಿನಾದ, ಭಕ್ತರ ಜಯಘೋಷಗಳ ನಡುವೆ ಮಹಾ ರಥೋತ್ಸವ ಅದ್ಧೂರಿಯಿಂದ ಜರುಗಿತು.
ಶ್ರೀಮಠದ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ರಥ ಹಾಗೂ ಉತ್ಸವ ಮೂರ್ತಿ ಪ್ರಹ್ಲಾದ ರಾಜರಿಗೆ ಪೂಜೆ ಸಲ್ಲಿಸಿದ ನಂತರ ರಾಜ ಬೀದಿಯಲ್ಲಿ ಸಂಚರಿಸಿದ ರಥ ಪುನಃ ಶ್ರೀಮಠಕ್ಕೆ ಬಂದು ತಲುಪಿತು. ಶ್ರೀಮಠದ ಮುಂಭಾಗದಲ್ಲಿ ಸೇರಿದಂತೆ ರಾಜ ಬೀದಿಯ ಇಕ್ಕೆಲಗಳಲ್ಲಿ ಸೇರಿದ್ದ ಅಪಾರ ಸಂಖ್ಯೆಯ ಭಕ್ತ ಸಮೂಹ ರಥೋತ್ಸವವನ್ನು ಕಣ್ತುಂಬಿಕೊಂಡರು.
ಉತ್ತರಾರಾಧನೆ ನಿಮಿತ್ತ ಬೆಳಗ್ಗೆ ರಾಯರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಮಹಾ ಮಂಗಳರಾತಿ, ಹೂವುಗಳಿಂದ ಅಲಂಕಾರ ನೆರವೇರಿಸಲಾಯಿತು.
ರಥೋತ್ಸವ ನಿಮಿತ್ತ ದೇಶ, ವಿದೇಶಗಳಿಂದ ಆಗಮಿಸಿದ್ದ ಭಕ್ತರ ಜೊತೆಗೆ ಮಂತ್ರಾಲಯದ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮಂತ್ರಾಲಯಕ್ಕೆ ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಶ್ರೀಮಠದ ವ್ಯವಸ್ಥಾಪಕರಾದ ಎಸ್.ಕೆ.ಶ್ರೀನಿವಾಸ, ವೆಂಕಟೇಶ ಜೋಷಿ, ಆಡಳಿತಾಕಾರಿ ಮಾಧವಶೆಟ್ಟಿ, ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ನಿವೃತ್ತ ಪ್ರಾಚಾರ್ಯ ಡಾ.ಎನ್.ವಾದಿರಾಜಚಾರ್ ಸೇರಿದಂತೆ ಶ್ರೀಮಠದ ಸಿಬ್ಬಂದಿ ಉಪಸ್ಥಿತರಿದ್ದರು.