ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಮ್ಮಿಕೊಂಡಿರುವ ದತ್ತಜಯಂತಿ ಉತ್ಸವದ ಅಂಗವಾಗಿ ಗುರುವಾರ ದತ್ತಪೀಠದಲ್ಲಿ ಮಹಿಳೆಯರಿಂದ ಅನಸೂಯ ಜಯಂತಿ ಅದ್ಧೂರಿಯಾಗಿ ನಡೆಯಿತು.
ಅನಸೂಯ ಜಯಂತಿ ಅಂಗವಾಗಿ ನಗರದ ಬೋಳರಾಮೇಶ್ವರ ದೇವಸ್ಥಾನದಿಂದ ಪಾಲಿಟೆಕ್ನಿಕ್ ವೃತ್ತದವರೆಗೂ ಭವ್ಯ ಸಂಕೀರ್ತನಾ ಮೆರವಣಿಗೆ ನಡೆಸಲಾಯಿತು. ಈ ಮೆರವಣಿಗೆಯಲ್ಲಿ ಎರಡು ಸಾವಿರಕ್ಕೂ ಅಧಿಕ ಮಹಿಳೆಯರು ಪಾಲ್ಗೊಂಡಿದ್ದರು. ಮೆರವಣಿಗೆಯುದ್ದಕ್ಕೂ ಮಹಿಳೆಯರ ಡೊಳ್ಳು ಕುಣಿತ ತಂಡಗಳು, ಭಜನಾ ತಂಡಗಳು ಸಂಕೀರ್ತನಾ ಯಾತ್ರೆಯ ಮೆರುಗನ್ನು ಹೆಚ್ಚಿಸಿದ್ದವು.
ಬೆಳ್ಳಂಬೆಳಗ್ಗೆಯೇ ಶ್ರೀಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ ಜಮಾಯಿಸಿದ ಸಾವಿರಾರು ಮಹಿಳೆಯರು ಅಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದತ್ತಾತ್ರೇಯದ ಅಡ್ಡೆಗೆ ಪೂಜೆ ಸಲ್ಲಿಸುವ ಮೂಲಕ ಸಂಕೀರ್ತನಾ ಯಾತ್ರೆಗೆ ಚಾಲನೆ ನೀಡಲಾಯಿತು. ವಿಶೇಷವಾಗಿ ಹುಬ್ಬಳ್ಳಿಯ ಸಾದ್ವಿನಿ ತೇಜೋಮಯಿ ಮಾತಾಜಿ ಹಾಗೂ ಆದಿಶಕ್ತಿ ನಗರದ ಶ್ರೀ ಪ್ರಾಣ ಮಾತಾಜಿ ಯಾತ್ರೆಗೆ ಚಾಲನೆ ನೀಡುವ ಜೊತೆಗೆ ಮೆರವಣಿಗೆಯುದ್ದಕ್ಕೂ ಹೆಜ್ಜೆ ಹಾಕಿ ಮಹಿಳಾ ಭಕ್ತರನ್ನು ಹುರಿದುಂಬಿಸಿದ್ದು ವಿಶೇಷವಾಗಿತ್ತು.
ಬೊಳರಾಮೇಶ್ವರ ದೇವಸ್ಥಾನ ಆವರಣದಿಂದ ಆರಂಭಗೊAಡ ಮೆರವಣಿಗೆ ಐ.ಜಿ.ರಸ್ತೆ ಮೂಲಕ ಮಲ್ಲಂದೂರು ವೃತ್ತವನ್ನು ಹಾದು ಪಾಲಿಟೆಕ್ನಿಕ್ ವೃತ್ತದವರೆಗೂ ಸಾಗಿತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಮಹಿಳೆಯರು ಕೊರಳಿಗೆ ಕೇಶರಿ ಶಲ್ಯವನ್ನು ಹಾಕಿಕೊಂಡು ಭಾಗವಾಧ್ವಜ ಹಿಡಿದು, ಅನಸೂಯದೇವಿ ಚಿತ್ರಪಟದೊಂದಿಗೆ ದತ್ತಾತ್ರೇಯರ ನಾಮಸ್ಮರಣೆ ಮಾಡುತ್ತಾ ಮೆರವಣಿಯಲ್ಲಿ ತೆರಳಿದರು. ಕೆಲವರು ದತ್ತಾತ್ರೇಯ ಸ್ವಾಮಿಗೆ ಜೈಕಾರ ಹಾಕಿದರೆ, ಮತ್ತೆ ಕೆಲವರು ಭಜನೆಮಾಡುತ್ತಾ ಹೆಜ್ಜೆಹಾಕಿದರು.
ಪಾಲಿಟೆಕ್ನಿಕ್ ವೃತ್ತಕ್ಕೆ ತೆರಳಿದ ಮಹಿಳೆಯರು ಅಲ್ಲಿಂದ ಕಾರ್ಯಕ್ರಮದ ಸಂಘಟಕರು ವ್ಯವಸ್ಥೆ ಮಾಡಿದ್ದ ವಾಹನಗಳಲ್ಲಿ ದತ್ತಪೀಠಕ್ಕೆ ತೆರಳಿದರು. ಅಲ್ಲಿ ಸರದಿಸಾಲಿನಲ್ಲಿ ನಿಂತು ಅನಸೂಯ ದೇವಿ ಗದ್ದುಗೆಗೆ ತೆರಳಿಪೂಜೆ ಸಲ್ಲಿಸಿದರು. ಗುಹೆಯೊಳಗೆ ತೆರಳಿ ದತ್ತಾತ್ರೇಯರ ಪಾದುಕೆಗಳ ದರ್ಶನ ಪಡೆದುಕೊಂಡರು.
ಅನಸೂಯ ಜಯಂತಿಯಲ್ಲಿ ಪಾಲ್ಗೊಂಡಿದ್ದ ಮಾತೆಯರಿಗೆ ದತ್ತಪೀಠದಲ್ಲಿ ಹಸಿರು ಬಳೆ, ಅರಿಶಿಣ,ಕುಂಕುಮ ನೀಡಲಾಯಿತು. ಪ್ರಸಾದ ಸ್ವೀಕರಿಸುವ ಮೂಲಕ ದತ್ತಪೀಠದಿಂದ ನಗರಕ್ಕೆ ಆಗಮಿಸಿದರು. ದತ್ತಜಯಂತಿ ಅಂಗವಾಗಿ ನಡೆಯುವ ಅನುಸೂಯ ಜಯಂತಿ ಶಾಂತಿಯುತವಾಗಿ ಮುಕ್ತಾಯಗೊಂಡಿತು.
ಅನಸೂಯಾ ಜಯಂತಿ ಕಾರ್ಯಕ್ರಮದಲ್ಲಿ ನಗಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಪ್ರಮುಖರಾದ ತನ್ಮಯಿ ಪ್ರೇಮ್ ಕುಮಾರ್, ಆರ್.ಡಿ.ಮಹೇಂದ್ರ, ಶ್ರೀಕಾಂತ್ ಪೈ, ಸಂತೋಷ್ ಕೋಟ್ಯಾನ್, ಜಸಂತ ಅನಿಲ್ ಕುಮಾರ್ ಮತ್ತಿತರರಿದ್ದರು.