filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.3800926, 0.20425001);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37; 
ಜಿಲ್ಲೆ

ಅದ್ಧೂರಿ ಹನುಮ ಜಯಂತ್ಯುತ್ಸವ

*ಗಮನ ಸೆಳೆದ ಶ್ರೀರಾಮ ಮತ್ತು ಶ್ರೀಆಂಜನೇಯ ವಿಗ್ರಹ

*ಮೆರವಣಿಗೆಗೆ ಮೆರುಗು ತುಂಬಿದ ಕಲಾತಂಡಗಳು

ಚಾಮರಾಜನಗರ: ಶ್ರೀಹನುಮ ಜಯಂತೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ 3ನೇ ವರ್ಷದ ಹನುಮ ಜಯಂತಿ ಹಾಗೂ ಶ್ರೀರಾಮ ಮತ್ತು ಶ್ರೀಆಂಜನೇಯಸ್ವಾಮಿ ವಿಗ್ರಹದ ಭವ್ಯ ಮೆರವಣಿಗೆ ಶನಿವಾರ ಅದ್ದೂರಿಯಾಗಿ ಜರುಗಿತು.

ನಗರದ ಮಾರಿಗುಡಿ ಮುಂಭಾಗದಲ್ಲಿ ಶ್ರೀಅಭಯ ಕಾರ್ಯಸಿದ್ಧಿ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಶ್ರೀಹನುಮ ಜಯಂತೋತ್ಸವಕ್ಕೆ ವಿವಿಧ ಮುಖಂಡರು ಹಾಗೂ ಅಪಾರ ಭಕ್ತಾದಿಗಳ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು. ಅಲ್ಲಿಂದ ಸಾಗಿದ ಮೆರವಣಿಗೆ ಮಾರುಕಟ್ಟೆ ರಸ್ತೆ, ನೃಪತುಂಗ ವೃತ್ತ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಶ್ರೀಆದಿಶಕ್ತಿ ದೇವಸ್ಥಾನದ ಬಳಿ ಸಾಗಿ ಮತ್ತೆ ಹಿಂದಿರುಗಿ ಡಿವಿಯೇಷನ್ ರಸ್ತೆ, ಶ್ರೀಭುವನೇಶ್ವರಿ ವೃತ್ತ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ರಸ್ತೆ, ವಾಣಿಯರ್ ರಸ್ತೆ, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ ಬೀದಿ, ಮಹಾವೀರ ವೃತ್ತ, ಶ್ರೀವೀರಭದ್ರೇಶ್ವರಸ್ವಾಮಿ ದೇವಸ್ಥಾನದ ರಸ್ತೆ ಮಾರ್ಗವಾಗಿ ಸಾಗಿ ಮಾರಿಗುಡಿ ಬಳಿ ಸಮಾಪ್ತಿಯಾಯಿತು.

ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಯುವಕರು ಭಾಗವಹಿಸಿದ್ದರು. ಮೆರವಣಿಗೆ ಉದ್ದಕ್ಕೂ ಯುವಕರು ಕುಣಿದು ಕುಪ್ಪಳಿಸಿದರು. ಕೇಸರಿ ಧ್ವಜಗಳನ್ನು ಬೀಸುತ್ತ ಸಂಭ್ರಮಪಟ್ಟರು. ಬಳಿಕ ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಶ್ರೀ ಹನುಮ ಜಯಂತೋತ್ಸವದ ಮೆರವಣಿಗೆ ಅಂಗವಾಗಿ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.

ಗಮನಸೆಳೆದ ಶ್ರೀರಾಮನ ಪ್ರತಿಮೆ:

ಶ್ರೀಆಂಜನೇಯಸ್ವಾಮಿ ಜಯಂತ್ಯುತ್ಸವ ಮೆರವಣಿಗೆಯಲ್ಲಿ ಶ್ರೀರಾಮನ ಬೃಹತ್ ಪ್ರತಿಮೆ ಗಮನ ಸೆಳೆಯಿತು. ಬಿಲ್ಲು ಬಾಣವಿಡಿದು ನಿಂತಿರುವ ಬೃಹತ್ ಶ್ರೀರಾಮನಮೂರ್ತಿ ಬಹಳ ಆಕರ್ಷಿತವಾಗಿತ್ತು. ಶ್ರೀರಾಮ ಮತ್ತು ಆಂಜನೇಯನ ವೇಷಧಾರಿ ಮಕ್ಕಳು ಸಾರ್ವಜನಿಕರ ಗಮನ ಸೆಳೆದರು. ಉಳಿದಂತೆ ಹೆಗ್ಗೋಠಾರ ಗ್ರಾಮದ ನಂದಿಧ್ವಜ ಕುಣಿತ, ಗಾಡಿಗೊಂಬೆ ಕುಣಿತ, ನಗಾರಿ, ಡೊಳ್ಳು ಕುಣಿತ, ಚೆಂಡೆ ವಾದನ, ವೀರಗಾಸೆ ಕುಣಿತ ಹಾಗೂ ಇನ್ನಿತರೆ ಜಾನಪದ ಕಲಾತಂಡಗಳು ಶ್ರೀಹನುಮ ಜಯಂತ್ಯುತ್ಸವದ ಮೆರವಣಿಗೆಗೆ ಮತ್ತಷ್ಟು ಮೆರುಗು ತುಂಬಿತು. ಸಾವಿರಾರು ಭಕ್ತಾಧಿಗಳು, ಯುವಕರು ಕೇಸರಿ ಧ್ವಜಗಳನ್ನು ಬೀಸುತ್ತಾ ಮೆರವಣಿಗೆಯ ಉದ್ದಕ್ಕೂ ಕುಣಿದು ಕುಪ್ಪಳಿಸಿದರು.

ಬಿಗಿ ಪೊಲೀಸ್ ಬಂದೋಬಸ್ತ್:

ನಗರದಲ್ಲಿ ಹನುಮ ಜಯಂತ್ಯುತ್ಸವದ ಹಿನ್ನೆಲೆ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಪಥ ಸಂಚಲನ ನಡೆಸಿದರು. ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಹೊರಟ ಮೆರವಣಿಗೆ ಬಿ.ರಾಚಯ್ಯ ಜೋಡಿ ರಸ್ತೆ, ಶ್ರೀ ಭುವನೇಶ್ವರಿ ವೃತ್ತ, ಡಿವಿಯೇಷನ್ ರಸ್ತೆ, ಗುಂಡ್ಲುಪೇಟೆ ವೃತ್ತ, ದೊಡಂಗಡಿ ಬೀದಿ, ಹಳೆ ಖಾಸಗಿ ಬಸ್ ನಿಲ್ದಾಣ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ ಹಾಗೂ ಬಿ.ರಾಚಯ್ಯ ಮಾರ್ಗವಾಗಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಅಂತ್ಯವಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಡಿವೈಎಸ್ಪಿ ಲಕ್ಷ್ಮಯ್ಯ, ಧರ್ಮೇಂದ್ರ ನೇತೃತ್ವದಲ್ಲಿ ಸುಮಾರು 300 ಪೊಲೀಸರನ್ನು ನಿಯೋಜಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.