ಜಿಲ್ಲೆ

ಅದ್ದೂರಿ ಸ್ವಾಗತಕ್ಕೆ ಪೂರ್ವಭಾವಿ ಸಭೆ

ಸುರಪುರ: ಮಂಡ್ಯದಲ್ಲಿ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿಮಿತ್ತ ಜಾಗೃತಿ ಮೂಡಿಸಲು ಕನ್ನಡ ಜ್ಯೋತಿ ರಥಯಾತ್ರೆ ಸುರಪುರಕ್ಕೆ ಬರಲಿದ್ದು, ಅದನ್ನು ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಎಚ್.ಎ.ಸರಕಾವಸ್ ಹೇಳಿದರು.

ನಗರದ ತಹಸಿಲ್ ಕಚೇರಿಯಲ್ಲಿ ಸೋಮವಾರ ಕನ್ನಡ ಜ್ಯೋತಿ ರಥಯಾತ್ರೆ ನಿಮಿತ್ತ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡ ಜ್ಯೋತಿ ರಥಯಾತ್ರೆ ಸೋಮವಾರ ಸಂಜೆ ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ವೃತ್ತಕ್ಕೆ ಆಗಮಿಸಲಿದ್ದು, ಕನ್ನಡ ಪರ ಮನಸ್ಸಗಳ ಸಹಕಾರದಿಂದ ಸ್ವಾಗತಿಸಿ ಶ್ರೀ ಪ್ರಭು ಕಾಲೇಜಿನಲ್ಲಿ ವಾಸ್ತವ್ಯ ಮಾಡಲಿದೆ. ಮಂಗಳವಾರ ಬೆಳಗ್ಗೆ ಐತಿಹಾಸಿಕ ವೇಣುಗೋಪಾಲ ಸ್ವಾಮಿ ದೇಗುಲದಿಂದ ಮೆರವಣಿಗೆ ನಡೆದು ಕೆಂಭಾವಿಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.

ರಥಯಾತ್ರೆ ವೇಳೆ ಬೇಕಾಗುವ ಸಕಲ ವ್ಯವಸ್ಥೆ ಕೈಗೊಳ್ಳುವಂತೆ ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು. ವಾಸ್ತವ್ಯ ಕನ್ನಡ ಜ್ಯೋತಿ ರಥಯಾತ್ರೆ ಆಗಮಿಸಲಿದ್ದು, ರಾತ್ರಿ ಮತ್ತು ಬೆಳಗ್ಗೆತನಕ ಸೂಕ್ತ ಬಂದೋಬಸ್ತ್ ಕೈಗೊಳ್ಳಬೇಕು. ತಾಲೂಕು ಕೇಂದ್ರದಲ್ಲಿ ರಥ ಸಂಚರಿಸುವ ಮತ್ತು ತಿರುಗುವ ವೇಳೆ ರಥಕ್ಕೆ ಸೂಕ್ತ ಭದ್ರತೆ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಿದರು.

ಕನ್ನಡ ಸಂಘಟನೆಗಳ ಮುಖಂಡರು ಮಾತನಾಡಿ, ಕನ್ನಡ ಬಾವುಟ, ಮಕ್ಕಳಿಗೆ ಬಿಸ್ಕಟ್, ನೀರಿನ ವ್ಯವಸ್ಥೆ ಮಾಡಬೇಕು. ಮೆರವಣಿಗೆಯಲ್ಲಿ ಯಾವುದೇ ತೊಂದರೆಯಾಗದAತೆ ಸಂಚಾರ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಸಾಪ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ, ಕಸಾಪ ಗೌರವ ಕಾರ್ಯದರ್ಶಿ ಎಚ್. ರಾಥೋಡ್, ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಭೈರಿಮಡ್ಡಿ, ಭೀಮು ನಾಯಕ, ದೆವು ಹೆಬ್ಬಾಳ, ಸಚಿನ್ ನಾಯಕ, ಪ್ರಕಾಶ ಬಣಗಾರ, ತಾಲೂಕು ಮಟ್ಟದ ಅಧಿಕಾರಿಗಳಾದ ಬಸವರಾಜ ಸಜ್ಜನ್, ತಿಪ್ಪಾರೆಡ್ಡಿ ಪಾಟೀಲ್, ಸುರೇಶ ಹಚ್ಚಡ, ಜೀವನ ಕಟ್ಟಿಮನಿ, ಡಾ.ಭೀಮರಾಯ ಹವಾಲ್ದಾರ, ಗುರುಸ್ವಾಮಿ, ಪಂಡಿತ್ ನಿಂಬೂರೆ, ರಮೇಶ, ಪಿಎಸ್‌ಐ ಸಿದ್ದಣ್ಣ ಇತರರಿದ್ದರು.