ತುಮಕೂರು:ಅದ್ದೂರಿ, ಆಡಂಬರದ ವಿವಾಹಗಳ ಮೋಹದ ಸುಳಿಗೆ ಸಿಲುಕಿ ಮದುವೆಯ ಸಾಂಸತಿಕ ಸ್ವರೂಪಗಳೇ ಬದಲಾಗುತ್ತಿವೆ. ಸರಳ ವಿವಾಹಗಳು ಮೂಲೆಗುಂಪಾಗುತ್ತಿವೆ ಎಂದು ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯೆ ಎಂ.ಸಿ.ಲಲಿತಾ ಆತಂಕ ವ್ಯಕ್ತಪಡಿಸಿದರು.
ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರ ಸೋಮವಾರ ಆಯೋಜಿಸಿದ್ದ ಬದಲಾದ ಕಾಲಘಟ್ಟದಲ್ಲಿ ವರದಕ್ಷಿಣೆ ಪರಿಕಲ್ಪನೆ ಕುರಿತ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಮದುವೆಗಳಿಗೆ ತನ್ನದೇ ಆದ ವಿಶೇಷತೆಗಳಿವೆ, ಸಾಂಸತಿಕ ಆಚರಣೆಗಳಿವೆ. ಆದರೆ ಇಂದು ಅದ್ದೂರಿ ಆಡಂಬರಗಳ ಒಡ್ಡೋಲಗದಲ್ಲಿ ಈ ಎಲ್ಲ ಆಚರಣೆಗಳು ಮರೆಯಾಗುತ್ತಿವೆ ಎಂದರು.
ಈಗ ವರದಕ್ಷಿಣೆ ಎಂಬ ಹೆಸರು ಕಡಿಮೆಯಾಗಿರಬಹುದು. ಆದರೆ, ಮದುವೆ ಖರ್ಚು ಎಷ್ಟಾಗುತ್ತಿದೆ. ಇದಕ್ಕಾಗಿ ಹೆಣ್ಣು ಹೆತ್ತವರು ಮಾಡುತ್ತಿರುವ ಸಾಲ ಎಷ್ಟು ಎಂಬುದನ್ನು ನಾವಿಂದು ಗಂಭೀರವಾಗಿ ಅವಲೋಕಿಸಬೇಕಿದೆ. ಶಾಸ್ತ್ರಗಳೇ ಇಲ್ಲದ ವಿವಾಹಗಳು ಆಧುನಿಕತೆಯ ಭರಾಟೆಗೆ ಸಿಲುಕಿವೆ. ಮುಹೂರ್ತಕ್ಕೂ ಮೊದಲ ದಿನವೇ ಆರತಕ್ಷತೆಗಳಾಗುತ್ತಿವೆ. ತರಹೇವಾರಿ ಆಹಾರವನ್ನು ತಿನ್ನಲಾಗದೇ ಎಲೆಯಲ್ಲಿ ಬಿಟ್ಟುಹೋಗುತ್ತಿರುವ ಸನ್ನಿವೇಶಗಳನ್ನು ಕಾಣುತ್ತಿದ್ದೇವೆ. ಈ ಬಗ್ಗೆ ಇಂದಿನ ಜನ ಯೋಚಿಸಬೇಕಿದೆ ಎಂದರು.
ಲೇಖಕಿ ಬಾ.ಹ.ರಮಾಕುಮಾರಿ ಮಾತನಾಡಿ, ಬಹಳಷ್ಟು ಜನ ಮಾತನಾಡುವಾಗ ವರದಕ್ಷಿಣೆ ಸಮಸ್ಯೆ ಈಗ ಇಲ್ಲ ಎನ್ನುತ್ತಾರೆ. ಆದರೆ, ವಿವಾಹದ ಖರ್ಚು ಲಕ್ಷ ಲಕ್ಷ ರೂ. ದಾಟಿ ಹೋಗಿರುತ್ತದೆ. ಇದಕ್ಕಾಗಿ ಸಾಲ ಮಾಡುತ್ತಿದ್ದಾರೆ.ತೀರಿಸಲಾಗದೇ ಹೆಣಗಾಡುತ್ತಾರೆ. ಇದೆಲ್ಲವನ್ನೂ ಗಮನಿಸಿದಾಗ ವರದಕ್ಷಿಣೆಯ ಸ್ವರೂಪ ಬದಲಾಗಿದೆಯೇ ಹೊರತು ವರದಕ್ಷಿಣೆ ಈ ನಮ್ಮ ಸಮಾಜದಿಂದ ದೂರ ಹೋಗಿಲ್ಲ ಎಂದರು.
ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಮಾತನಾಡಿ, 1992ರಿಂದ ಕಾನೂನು ವಿದ್ಯಾರ್ಥಿಗಳಿಂದ ಅಸ್ಥಿತ್ವಕ್ಕೆ ಬಂದ ಈ ಸಾಮಾಜಿಕ ಚಿಂತನೆಯ ವೇದಿಕೆ ವರದಕ್ಷಿಣೆ ವಿರೋಧಿ ಮನೋಭಾವವನ್ನು ವಿದ್ಯಾರ್ಥಿ ಹಂತದಲ್ಲಿಯೇ ಮೂಡಿಸುವ ಸಲುವಾಗಿ ಪ್ರತಿವರ್ಷ ನವೆಂಬರ್ ತಿಂಗಳಲ್ಲಿ
ಶಾಲಾ ಕಾಲೇಜುಗಳಲ್ಲಿ ಅರಿವು ಸಪ್ತಾಹ ಆಚರಿಸಿಕೊಂಡು ಬರುತ್ತಿದೆ ಎಂದರು.
ಪ್ರಬಂಧ ಸ್ಪರ್ಧೆ ತೀಪುಗಾರರಾದ ಲೇಖಕಿ ಸಿ.ಎಲ್.ಸುನಂದಮ್ಮ ಮಾತನಾಡಿ, ವರದಕ್ಷಿಣೆ ವ್ಯಾಖ್ಯಾನ ಹಾಗೂ ಬದಲಾದ ಪರಿಸ್ಥಿತಿಯಲ್ಲಿ ವಿವಿಧ ಲೇಖಕರ ಅಭಿಪ್ರಾಯ ಬರಹಗಳನ್ನು ಅವಲೋಕಿಸಿ ಮಾತನಾಡಿದರು. ಸ್ಪರ್ಧಾ ವಿಜೇತರ ಪರವಾಗಿ ಪ್ರಥಮ ಬಹುಮಾನ ಪಡೆದ ಶಿರಾ ತಾಲೂಕು ಕಸಾಪ ಮಾಜಿ ಅಧ್ಯಕ್ಷ ವೈ.ನರೇಶ್ಬಾಬು, ದ್ವೀತಿಯ ಬಹುಮಾನ ಪಡೆದ ಕನ್ನಡ ಸಹ ಶಿಕ್ಷಕ ಟಿ.ನರೇಂದ್ರಬಾಬು, ತೃತೀಯ ಬಹುಮಾನ ಪಡೆದ ತೋವಿನಕೆರೆ ಗಿರಿಜಮ್ಮ ಮಾತನಾಡಿದರು.