ಜಿಲ್ಲೆ

ಅದ್ದೂರಿ ಮೆರವಣಿಗೆ ಮೂಲಕ ಗಣೇಶ ಮೂರ್ತಿ ವಿಸರ್ಜನೆ

ಹಾಸನ: ನಗರದ ಗಣಪತಿ ಪೆಂಡಾಲ್‌ನಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ-ಗಣೇಶ ಮೂರ್ತಿಯನ್ನು ಶನಿವಾರ ಹೂವಿನ ಅಲಂಕಾರದಿಂದ ಸಿಂಗಾರಿಸಿದ ವಾಹನದಲ್ಲಿ ಕುಳ್ಳಿರಿಸಿ ಭವ್ಯ ಮೆರವಣಿಗೆ ನಡೆಸಲಾಯಿತು. ಬೆಳಗ್ಗೆ 10.30ಕ್ಕೆ ಆರಂಭವಾದ ಮೆರವಣಿಗೆ ನಗರದ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಿ ರಾತ್ರಿ ನಗರದ ದೇವಿಗೆರೆಯಲ್ಲಿ ತೆಪ್ಪೋತ್ಸವದ ಮೂಲಕ ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.
ವಿಸರ್ಜನಾ ಮಹೋತ್ಸವದ ಮೆರವಣಿಗೆ ಬೆಳಗ್ಗೆ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಅವರು ಕರ್ಪೂರ ಹಚ್ಚಿ, ಪುಷ್ಪ ಅರ್ಪಿಸಿ, ಕಾಯಿ ಒಡೆಯುವುದರ ಮೂಲಕ ಚಾಲನೆ ನೀಡಿದರು. ಬೆಳಗ್ಗೆ ಪ್ರಾರಂಭಗೊಂಡ ಮೆರವಣಿಗೆಯು ನಗರದ ರಾಜ ಬೀದಿಗಳಲ್ಲಿ ಸಂಜೆವರೆಗೂ ಮೆರವಣಿಗೆ ನಡೆಸಲಾಯಿತು. ಹೂವಿನಿಂದ ಅಲಂಕೃತಗೊಂಡಿದ್ದ ಗಣಪತಿ ಮತ್ತು ಗೌರಮ್ಮನ್ನು ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಜನರು ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದರು.
ಚಾಲನೆ ನೀಡಿ ಮಾತನಾಡಿದ ಶಾಸಕರು, ಪ್ರತಿ ವರ್ಷವೂ ಗಣಪತಿ ವಿಸರ್ಜನಾ ಮೆರವಣಿಗೆ ಅದ್ಧೂರಿಯಿಂದ ನಡೆಯುತ್ತಾ ಬಂದಿದೆ. ಅಂತೆಯೇ ಈ ಬಾರಿಯೂ ನಡೆಯುತ್ತಿದ್ದು, ಎಲ್ಲರಿಗೂ ಒಳ್ಳೆಯದಾಗಲಿ ಎಂದರು.
ಮೆರವಣಿಗೆ ತೆರಳುವ ರಸ್ತೆಯಲ್ಲಿ ಮಹಿಳೆಯರು ರಂಗೋಲಿ ಹಾಕಿದ್ದರು. ಅಲ್ಲದೆ ಕೆಲವು ಕಡೆ ಪ್ರಸಾದವನ್ನು ಕೂಡ ವಿತರಣೆ ಮಾಡಲಾಯಿತು. ನಗರದ ಬಹುತೇಕ ಕಡೆ ಗಣಪತಿ ಮೂರ್ತಿ ತೆರಳುವ ಬಡಾವಣೆಗಳಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು. ಕಲಾ ತಂಡಗಳ ನೃತ್ಯ ಮತ್ತು ಗಣಪತಿ ಮೂರ್ತಿಯನ್ನು ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡರು.
ಮೆರವಣಿಗೆ ತೆರಳುವ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ಅವರ ನೇತೃತ್ವದಲ್ಲಿ ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಗಣಪತಿ ಮೆರವಣಿಗೆ ಗಣಪತಿ ಪೆಂಡಾಲ್ ನಿಂದ ಹೊರಟು ಶಿವನಂಜಪ್ಪ ವೃತ್ತ, ಗಾಂಧಿ ಬಜಾರ್, ಹಾಸನಾಂಬ ವೃತ್ತ, ಸಂತೆ ಪೇಟೆ, ಹೊಸ ಲೈನ್ ರಸ್ತೆ, ಅರಳೇಪೇಟೆ ರಸ್ತೆ, ಪಾರ್ಕ್ ರಸ್ತೆ, ಸ್ಲೇಟರ್ಸ್ ವೃತ್ತ, ದೊಡ್ಡಿ ರೋಡ್, ಮಹಾವೀರ ವೃತ್ತ, ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾಗಿತು.
19ನೇ ವಾರ್ಡ್‌ನ ಅರಳೇಪೇಟೆ ನಿವಾಸಿಗಳು, ಅಂಗಡಿ ಮಾಲೀಕರ ಸಹಕಾರದೊಂದಿಗೆ ಸಹ್ಯಾದ್ರಿ ವೃತ ಸೇರಿ ಹಲವಾರು ಕಡೆ ಅನ್ನಸಂತರ್ಪಣೆ ನಡೆಸಲಾಗಿದೆ ಎಂದು ಹೇಳಿದರು. ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ಬಿಗಿ ಪೊಲೀಸ್ ಬಂದೋಬಸ್ ಕಲ್ಪಿಸಲಾಗಿತ್ತು. ರಾತ್ರಿ ದೇವಿಗೆರೆಗೆ ವಿಸರ್ಜನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸೇವಾ ಸಮಿತಿ ಅಧ್ಯಕ ಡಾ.ಎಚ್. ನಾಗರಾಜು,ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಧರ್ಮದರ್ಶಿಗಳಾದ ಲಲಾಟ್ ಮೂರ್ತಿ, ಬೂದೇಶ್, ಎಚ್.ಟಿ. ಶೇಖರ್, ಎಚ್.ಎಸ್. ಅನಂತನಾರಾಯಣ, ಎನ್.ಎಸ್. ಶಂಕರರಾವ್, ಎಚ್.ಎಂ.ಟಿ. ಸುರೇಶ್ ಕುಮಾರ್, ಎಂ.ಕೆ. ಕಮಲ್ ಕುಮಾರ್, ಎಚ್.ಡಿ. ದೀಪಕ್, ಲೀಲಾಕುಮಾರ್, ಹಾಗೂ ಸಿ.ಗಿರೀಗೌಡ, ರಾಮಚಂದ್ರಯ್ಯ, ಕಿರಣ್, ಪಿ.ಆರ್. ನಾಗೇಂದ್ರ, ನಗರಸಭೆ ಸದಸ್ಯ ಗಿರೀಶ್ ಚನ್ನವೀರಪ್ಪ, ಕಟ್ಟಾಯ ಶಿವಕುಮಾರ್, ಹನುಮಂತೇಗೌಡ, ಮಹಂತೇಶ್, ಕುಮಾರ್ ಭಾಗಿಯಾಗಿದ್ದರು.

ಜನರನ್ನು ಆಕರ್ಷಿಸಿದ ಕಲಾತಂಡಗಳು
ಮೆರವಣಿಗೆಯಲ್ಲಿ ನಾದಸ್ವರ, ನಂದಿಧ್ವಜ, ಚಿಟ್ಟಿಮೇಳ, ಪೂಜಾ ಕುಣಿತ, ವೀರಗಾಸೆ, ದೊಣ್ಣೆ ವರಸೆ, ಡೊಳ್ಳು ಕುಣಿತ, ಕರಗ, ಯಕ್ಷಗಾನ, ಸುಗ್ಗಿ ಕುಣಿತ, ಹುಲಿ ವೇಷ, ಸೋಮನ ಕುಣಿತ, ಚಂಡೆ ಮೇಳ, ಕಂಸಾಳೆ, ಪಟ್ಟದ ಕುಣಿತ, ಕೋಲಾಟ, ನಗಾರಿ, ನಾಸಿಕ್ ಡೋಲು, ಎತ್ತರದ ಮನುಷ್ಯ, ಇಂಡಿಯಾ ಗೇಟ್, ಗಾರುಡಿ ಮತ್ತು ಚಿಲಿಪಿಲಿ ಗೊಂಬೆಗಳು, ಕೀಲು ಕುದುರೆ ಸೇರಿದಂತೆ 30ಕ್ಕೂ ಹೆಚ್ಚು ಕಲಾತಂಡಗಳು ಭಾಗಿಯಾಗಿದ್ದವು. ಒಂದು ತಂಡಕ್ಕಿಂತ ಇನ್ನೊಂದು ತಂಡವು ವಿಭಿನ್ನವಾಗಿ ಪ್ರದರ್ಶನ ನೀಡುವ ಮೂಲಕ ನಗರದ ಜನರನ್ನು ರಂಜಿಸಿದವು.

ಅ.1ರಂದು ಅನ್ನ ಸಂತರ್ಪಣೆ
ಗಣಪತಿ ಮೂರ್ತಿ ವಿಸರ್ಜನೆ ಅಂಗವಾಗಿ ಅ.1ರ ಮಂಗಳವಾರ ಮಧ್ಯಾಹ್ನ 12.30ಕ್ಕೆ ಗಣಪತಿ ಪೆಂಡಾಲಿನಲ್ಲಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಸಮಿತಿ ಮನವಿ ಮಾಡಿದೆ.