ಮೈಸೂರು: ಅದ್ದೂರಿ ಮದುವೆಗಳು ಸಾಲದ ಸಂಕೋಲೆಗೆ ದಾರಿ ಮಾಡಿಕೊಡುತ್ತಿವೆ ಎಂದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಶ್ರೀ ನಾರಾಯಣಗುರು ಮಹಾಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ದಿವಂಗತ ಡಾ.ಪುನೀತ್ ರಾಜ್‌ಕುಮಾರ್ ಜನ್ಮದಿನದ ಅಂಗವಾಗಿ ಡಾ.ಪುನೀತ್ ರಾಜ್‌ಕುಮಾರ್ ಸಮಾಜ ಸೇವಾ ಸಮಿತಿ ವತಿಯಿಂದ ನಗರದ ದಸರಾ ವಸ್ತುಪ್ರದರ್ಶನ ಆವರಣದ ಪಿ.ಕಾಳಿಂಗರಾವ್ ಗಾನಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಧುನಿಕ ಸಮಾಜದಲ್ಲಿ ಅದ್ದೂರಿ ಮದುವೆ ಕಾರ್ಯಕ್ರಮಗಳು ಅಧಿಕವಾಗಿವೆ. ಇದುವೇ ದುಂದುವೆಚ್ಚಕ್ಕೂ ಕಾರಣವಾಗಿವೆ. ಹೆಣ್ಣಿನ ಮನೆಯವರು ಸಾಲ ಮಾಡಿ ವಿವಾಹ ಮಾಡುವಂತಾಗಿದೆ. ಜೀವನವಿಡೀ ದುಡಿದ ಹಣವನ್ನು ಒಂದು ದಿನದಲ್ಲಿ ಖರ್ಚು ಮಾಡಿ, ಮುಂದಿನ ಉಳಿದ ದಿನಗಳನ್ನು ಸಾಲ ತೀರಿಸಲು ಹೆಣಗಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಯೊಬ್ಬರು ಸಾಮೂಹಿಕ ವಿವಾಹಕ್ಕೆ ಆದ್ಯತೆ ನೀಡಬೇಕು. ಇದರಿಂದ ದುಂದುವೆಚ್ಚವಷ್ಟೇ ಅಲ್ಲ, ಖರ್ಚು ಸಹ ಕಡಿಮೆಯಾಗಲಿದೆ. ಬಡವರು, ಮಧ್ಯಮ ವರ್ಗದವರು ಸಾಲದಿಂದ ಮುಕ್ತಿ ಪಡೆಯಲು ಇದುವೇ ದಾರಿ ಮಾಡಿಕೊಡುತ್ತದೆ ಎಂದರು.
ಅಪ್ಪು ಸಮಾಜ ಒಪ್ಪುವ ಕೆಲಸ ಮಾಡಿ ಅಮರರಾಗಿದ್ದಾರೆ. ಅವರ ಸಿನಿಮಾ ನಟನೆಯಷ್ಟೇ ಅಲ್ಲ, ಸಮಾಜ ಕಾರ್ಯವೂ ಇತರರಿಗೆ ಮಾದರಿಯಾಗಿದೆ. ಅಹಂ ಇಲ್ಲದ ಸರಳತೆ ಮೂಲಕ ಕನ್ನಡಿಗರ ಹೃದಯವನ್ನು ಪುನೀತ್ ರಾಜ್‌ಕುಮಾರ್ ಗೆದ್ದಿದ್ದಾರೆ. ಅವರ ಸೇವಾ ಕೆಲಸಗಳು ಇತರರಿಗೆ ಪ್ರೇರಣೆ ನೀಡಿವೆ ಎಂದರು.
8 ಜೋಡಿಗಳು ದಾಂಪತ್ಯ ಜೀವನವನ್ನು ಪ್ರವೇಶಿಸಿದವು. ನೂತನ ಸತಿಪತಿಗಳಿಗೆ ಗಣ್ಯರು ಹಾರೈಸಿದರು. ಯುವ ನಟ ಆರ್.ಕೆ. ದೀರನ್, ಬೆಂಗಳೂರು ವಿವಿ ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್‌ಗೌಡ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಕಾಂಗ್ರೆಸ್ ಮುಖಂಡರಾದ ಮಾವಿನಹಳ್ಳಿ ಸಿದ್ದೇಗೌಡ, ಬೀರಿಹುಂಡಿ ಬಸವಣ್ಣ, ಸಮಿತಿಯ ಅಧ್ಯಕ್ಷ ಎನ್.ರಾಜು ಇನ್ನಿತರರು ಪಾಲ್ಗೊಂಡಿದ್ದರು