ನಂಜನಗೂಡು: ತಾಲೂಕಿನ ಕಾರ್ಯ ಗ್ರಾಮದ ಶ್ರೀ ಸಿದ್ದೇಶ್ವರಸ್ವಾಮಿ ಬೆಟ್ಟದಲ್ಲಿ ಗುರುವಾರ ಜಾತ್ರಾ ಮಹೋತ್ಸವ ಅಂಗವಾಗಿ ಸಹಸ್ರಾರು ಭಕ್ತಸಮೂಹದ ನಡುವೆ ಉತ್ಸವಮೂರ್ತಿಯ ರಥೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ದೀಪಾವಳಿ ಮರುದಿನ ಜರುಗುವ ಜಾತ್ರಾ ಮಹೋತ್ಸವ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕಾಗಿ ಸರಳ ಹಾಗೂ ಸಾಂಪ್ರದಾಯಿಕವಾಗಿ ನೆರವೇರಿದ್ದರಿಂದ ಭಕ್ತರಿಗೆ ಅವಕಾಶ ಇರಲಿಲ್ಲ. ಎರಡು ವರ್ಷದ ತರುವಾಯ ನಡೆದ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ನಾನಾ ಮೂಲೆಗಳಿಂದ ಸಾಗರೋಪಾದಿಯಲ್ಲಿ ಆಗಮಿಸಿದ್ದ ಭಕ್ತರು ರಥೋತ್ಸವವನ್ನು ಕಣ್ತುಂಬಿಕೊಂಡರು.
ಮುಂಜಾನೆಯಿಂದಲೇ ಬೆಟ್ಟವೇರಿ ದರ್ಶನ ಪಡೆದ ಭಕ್ತರು ಭಕ್ತಿಯ ಪರಕಾಷ್ಠೆ ಮೆರೆದರು. ಸುಡು ಬಿಸಿಲ ನಡುವೆಯೂ ಭಕ್ತರ ಉತ್ಸಾಹ ಕುಗ್ಗದೆ ಪೂಜೆ ಸಲ್ಲಿಸಲು ಮುಗಿಬಿದ್ದರು. ಬೆಳಗಿನ ಜಾವವೇ ದೇವಾಲಯದ ಗರ್ಭಗುಡಿಯಲ್ಲಿ ವಿಶೇಷ ಪುಷ್ಪಾಲಂಕಾರ ಹಾಗೂ ಪೂಜಾ ಕೈಂಕರ್ಯ ಕೈಗೊಂಡು ಮಹಾಮಂಗಳಾರತಿ ನೆರವೇರಿಸಿದ ನಂತರ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.
ದೇವಾಲಯ ಒಳಪ್ರವೇಶಿಸಲು ಸರತಿ ಸಾಲಿನಲ್ಲಿ ಭಕ್ತರ ಸಂಖ್ಯೆ ಏರಿಕೆ ಕಂಡಿದ್ದರಿಂದ ನೂಕುನುಗ್ಗಲು ಉಂಟಾಯಿತು. ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು. ದೇವಾಲಯದ ಆವರಣದ ಸುತ್ತ ಪಂಜಿನ ಸೇವೆ, ಧೂಪದಾರತಿ ಸೇವೆ ಸಲ್ಲಿಸುವಲ್ಲಿ ಭಕ್ತರು ನಿರತರಾಗಿದ್ದರು.
ಬೆಟ್ಟದಲ್ಲಿ ಭಕ್ತರ ದಂಡು ಆಗಮಿಸುತ್ತಿದ್ದರೆ ಇತ್ತ ಕಾರ್ಯ ಗ್ರಾಮದಲ್ಲಿರುವ ಗದ್ದುಗೆ ಆವರಣದಲ್ಲಿ ಸಿದ್ಧೇಶ್ವರಸ್ವಾಮಿಯ ಉತ್ಸವಮೂರ್ತಿಯನ್ನು ಅಲಂಕರಿಸಿದ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಬಗೆಬಗೆಯ ಪುಷ್ಪಾಲಂಕಾರ, ಹೊಂಬಾಳೆ, ಚಾಮರ, ಅಲಂಕಾರಿಕ ಬಟ್ಟೆ ಸೇರಿದಂತೆ ಹಲವು ವಿನ್ಯಾಸದೊಂದಿಗೆ ಸಿಂಗರಿಸಿದ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ಉತ್ಸಾಹಭರಿತರಾದ ಭಕ್ತರು ಜೈಕಾರ ಹಾಕುತ್ತಾ ರಥವನ್ನು ಬೆಟ್ಟದ ತಪ್ಪಲಿಗೆ ಎಳೆದು ತಂದರು.
ರಥದಿಂದ ಪಲ್ಲಕ್ಕಿಯನ್ನು ಬೇರ್ಪಡಿಸಿ ಅದನ್ನು ಭಕ್ತರು ಹೊತ್ತುಕೊಂಡು ಬೆಟ್ಟವನ್ನು ಏರಿದರು. ದೇವರ ಗುಡ್ಡರು ಸಿದ್ಧೇಶ್ವರಸ್ವಾಮಿಯನ್ನು ಸ್ಮರಿಸುವ ಜಾನಪದ ಗೀತೆಗಳನ್ನು ಪಠಿಸುತ್ತ ಹೆಜ್ಜೆ ಹಾಕಿದರು. ಮಾರ್ಗದುದ್ದಕ್ಕೂ ಭಕ್ತ ಸಮೂಹ ಕಾರ್ಯ ಸಿದ್ದಪ್ಪನಿಗೆ ಉಫೇ ಉಘೇ ಎಂಬ ಉದ್ಘೋಷದೊಂದಿಗೆ ದೇವಾಲಯ ಆವರಣಕ್ಕೆ ಪಲ್ಲಕ್ಕಿಯನ್ನು ಹೊತ್ತು ತಂದರು.
ಬೆಟ್ಟದ ಮೇಲೆ ಹಾಗೂ ತಪ್ಪಲಿನ ಆಯಕಟ್ಟಿನ ಸ್ಥಳಗಳಲ್ಲಿ ಜಾತ್ರೆಗೆ ಆಗಮಿಸಿದ ಭಕ್ತರಿಗೆ ಸೇವಾರ್ಥದಾರರು ಅನ್ನ ಸಂತರ್ಪಣೆ ಏರ್ಪಡಿಸಿದ್ದರು. ಭಕ್ತರಿಗಾಗಿ ಪ್ರಮುಖ ಕಡೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಬೆಟ್ಟದ ತಪ್ಪಲಿನಲ್ಲಿ ತೆರೆಯಲಾಗಿದ್ದ ತಾತ್ಕಾಲಿಕ ಟೆಂಟ್ ಅಂಗಡಿಗಳಲ್ಲಿ ತಿಂಡಿ ತಿನಿಸುಗಳ ವ್ಯಾಪಾರ ಜೋರಾಗಿತ್ತು. ಜಾತ್ರಾ ಮಹೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಜನಸಾಗರವೇ ಹರಿದು ಬಂದಿತು. ಭಕ್ತರ ಅನುಕೂಲಕ್ಕಾಗಿ ನಂಜನಗೂಡು ಹಾಗೂ ತಿ.ನರಸೀಪುರ ಕಡೆಯಿಂದ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು. ಖಾಸಗಿ ವಾಹನಗಳ ಓಡಾಟ ಜೋರಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಬಸವನಿಗೆ ಕ್ಷೀರಾಭಿಷೇಕ: ಸುತ್ತಮುತ್ತಲಿನ ಗ್ರಾಮಗಳ ರೈತರು ತಮ್ಮ ಜಾನುವಾರುಗಳಿಗೆ ರೋಗ ರುಜಿನಗಳಿಗೆ ತುತ್ತಾಗದಂತೆ ಸಿದ್ದೇಶ್ವರ ದೇವಾಲಯದಲ್ಲಿರುವ ಬಸವಲಿಂಗಕ್ಕೆ ಹರಕೆ ಹೊತ್ತ ರೈತರು ಜಾತ್ರೆಗೆ ಜಾನುವಾರುಗಳನ್ನು ಕರೆತಂದು ಕ್ಷೀರಾಭಿಷೇಕ ಹಾಗೂ ಪಂಜಿನ ಸೇವೆ ಅರ್ಪಿಸಿದರು. ರೈತರು ತಮ್ಮ ಕುಟುಂಬ ಸದಸ್ಯರೊಂದಿಗೆ ಎತ್ತಿನಗಾಡಿಯಲ್ಲಿ ಜಾತ್ರೆಗೆ ಆಗಮಿಸಿದರೆ, ಹಲವರು ಕಾಲ್ನಡಿಗೆಯಲ್ಲಿ ಜಾನುವಾರುಗಳನ್ನು ಕರೆತರುತ್ತಿದ್ದ ದೃಶ್ಯ ಕಂಡುಬಂತು.