ಭಾಲ್ಕಿ: ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಇಲ್ಲಿಯ ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮೀಜಿ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವವನ್ನು ಅದ್ದೂರಿ ಜತೆ ಅರ್ಥಪೂರ್ಣವಾಗಿ ಆಯೋಜಿಸಲು ನಿರ್ಧರಿಸಲಾಯಿತು.
ಹಿರೇಮಠದಲ್ಲಿ ಶುಕ್ರವಾರ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಜಿಲ್ಲೆಯಲ್ಲದೆ ನೆರೆಯ ಕಲಬುರಗಿ ಸೇರಿ ಮಹಾರಾಷ್ಟ್ರ, ತೆಲಂಗಾಣದ ವಿವಿಧ ಜಿಲ್ಲೆಯ ಸಾವಿರಾರು ಭಕ್ತರು, ವಿವಿಧ ಸಂಘ-ಸಂಸ್ಥೆ ಮುಖಂಡರು, ಉದ್ಯಮಿಗಳು, ಗಣ್ಯರು ಭಾಗವಹಿಸಿ ಅಮೃತೋತ್ಸವ ಯಶಸ್ವಿ ಕುರಿತು ಸಲಹೆ ಸೂಚನೆ ನೀಡಿದರು.
ರಾಷ್ಟçಪತಿ, ದೇಶದ ಹೆಸರಾಂತ ಸಾಹಿತಿ, ಗಣ್ಯರಿಗೆ ಆಹ್ವಾನ, ಅಭಿನಂದನಾ ಗ್ರಂಥ ಲೋಕಾರ್ಪಣೆ, ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ಪೂಜ್ಯರ ಜೀವನ ಸಾಧನೆ ಕುರಿತು ಕಾರ್ಯಕ್ರಮ ಆಯೋಜನೆ, ರಾಜ್ಯಾದ್ಯಾಂತ ಅಭಿಯಾನ ರೂಪದಲ್ಲಿ ಪ್ರಚಾರ, ಅಂತಾರಾಜ್ಯ ಸಮ್ಮೇಳನ ಸೇರಿ ವಿವಿಧ ಸಲಹೆ ಸೂಚನೆಗಳು ಭಕ್ತರಿಂದ ಕೇಳಿಬಂದವು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಹಿರೇಮಠ ಸಂಸ್ಥಾನ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ವಿವಿಧ ಸಮಾಜಪರ ಸೇವೆ ಮೂಲಕ ಶ್ರೀಮಠವನ್ನು ರಾಜ್ಯ, ದೇಶದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಬಸವತತ್ವ ಪ್ರಚಾರ ಪ್ರಸಾರ ಜತೆಗೆ ಶಿಕ್ಷಣ, ಅನಾಥ ಮಕ್ಕಳ ಸೇವೆಗೈಯುತ್ತಿರುವುದು ಹೆಮ್ಮೆ ತರಿಸಿದೆ. ಎಲ್ಲರು ಸೇರಿ ಅರ್ಥಪೂರ್ಣವಾಗಿ ಪೂಜ್ಯರ ಅಮೃತ ಮಹೋತ್ಸವ ಮಾಡೋಣ ಎಂದು ಕರೆ ನೀಡಿದರು.
ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಪೂಜ್ಯರು ವಿಶಿಷ್ಟ ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲೆ ಅಲ್ಲದೆ ನೆರೆ ರಾಜ್ಯಗಳಲ್ಲಿ ಬಸವತತ್ವ ಪ್ರಚಾರ ಪ್ರಸಾರ ಜತೆಗೆ ಶಿಕ್ಷಣ ಸಂಸ್ಥೆ ತೆರೆದು ವಿದ್ಯಾದಾನದ ಮೂಲಕ ಸಾವಿರಾರು ಮಕ್ಕಳ ಭವಿಷ್ಯ ಬೆಳೆಗಿಸುತ್ತಿರುವ ಶ್ರೀಗಳ ಅಮೃತ ಮಹೋತ್ಸವ ಎಲ್ಲರೂ ಸೇರಿ ಅರ್ಥಪೂರ್ಣವಾಗಿ ಆಯೋಜಿಸೋಣ ಎಂದು ಹೇಳಿದರು.
ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿ.ಕೆ. ಸಿದ್ರಾಮ ಮಾತನಾಡಿ, ಪೂಜ್ಯರ ವಿಶಿಷ್ಟ ಸೇವೆ ಮೂಲಕ ಹಿರೇಮಠ ಸಂಸ್ಥಾನ ರಾಜ್ಯದಲ್ಲಿ ಶ್ರೇಷ್ಠ ಮಠವಾಗಿ ಬೆಳೆದಿದೆ. ಶ್ರೀಗಳ ಅಮೃತ ಮಹೋತ್ಸವ ಸವಿನೆನಪಿಗಾಗಿ ಬೃಹತ್ ಗ್ರಂಥ ಹೊರತರುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.
ನೇತೃತ್ವ ವಹಿಸಿದ್ದ ಶ್ರೀ ಶರಣಬಸವ ಸ್ವಾಮೀಜಿ ಮಾತನಾಡಿ, ಕಲ್ಯಾಣ ನಾಡಿನ ಮಠಾಧೀಶರಿಗೆ ಹಿರೇಮಠ ಸಂಸ್ಥಾನ ತವರು ಮನೆ ಇದ್ದಂತೆ. ಪೂಜ್ಯರು ಬಸವತತ್ವ ಆರಾಧಕರನ್ನು ನಾಡಿಗೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಅಮೃತ ಮಹೋತ್ಸವ ಯಶಸ್ಸಿಗೆ ವಹಿಸುವ ಜವಾಬ್ದಾರಿಯನ್ನು ಚಾಚೂತಪ್ಪದೆ ಪಾಲಿಸುವುದಾಗಿ ಹೇಳಿದರು.
ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಶಿಕ್ಷಕರಾಗುವ ಕನಸು ಕಂಡಿದ್ದ ಪೂಜ್ಯರು ಶ್ರೀಮಠಕ್ಕೆ ಪೀಠಾಧಿಪತಿ ಆಗಿರುವುದು ವಿಶೇಷ. ಆರ್ಥಿಕ ಸಂಕಷ್ಟದ ಸಮಯದಲ್ಲಿ ಮಠವನ್ನು ಮುನ್ನಡೆಸಿ ಇಂದು ರಾಜ್ಯ, ದೇಶದ ಗಮನ ಸೆಳೆಯುವಂತೆ ಮಾಡಿದ್ದಾರೆ. ಅನೇಕ ವಿಧಾಯಕ ಕಾರ್ಯಗಳ ಮೂಲಕ ಮಠದ ಕೀರ್ತಿ ಹೆಚ್ಚಿಸುವುದರ ಜತೆಗೆ ವಿದ್ಯಾ ದೇಗುಲ ತೆರೆದು ಗಡಿಯಲ್ಲಿ ಗುಣಾತ್ಮಕ ಶಿಕ್ಷಣ ಕೊಡುತ್ತಿದ್ದಾರೆ. ಅವರ ಅಮೃತ ಮಹೋತ್ಸವ ಅರ್ಥಪೂರ್ಣವಾಗಿಸಲು ನಿರ್ಧರಿಸಿದ್ದು, ಎಲ್ಲ ಭಕ್ತರು ತನು, ಮನ, ಧನದಿಂದ ಸಹಕರಿಸಬೇಕು ಎಂದು ಮನವಿ ಮಾಡಿದರು.
ಉದ್ಯಮಿ ಬಸವರಾಜ ಧನ್ನೂರ, ಬಸವರಾಜ ಬುಳ್ಳಾ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನನ್ನಶೆಟ್ಟಿ, ಶಕುಂತಲಾ ಬೆಲ್ದಾಳೆ, ಡಾ.ದೇವಿಕಾ ನಾಗೂರೆ, ಪಾರ್ವತಿ ಸೋನಾರೆ ಇತರರು ಸಲಹೆ ಸೂಚನೆ ನೀಡಿದರು.
ಪುರಸಭೆ ಅಧ್ಯಕ್ಷೆ ಶಶಿಕಲಾ ಅಶೋಕ, ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಶಿವಾನಂದ ಹೈಬತಪುರೆ, ಅಶೋಕ ಚಂದ್ರೆ ಇತರರಿದ್ದರು. ಸಂಗಯ್ಯ ಸ್ವಾಮಿ, ಲೋಕನಾಥ ಚಾಂಗಲೇರಾ ವಚನ ಸಂಗೀತ ನಡೆಸಿಕೊಟ್ಟರು. ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ ಸ್ವಾಗತಿಸಿದರು. ದೀಪಕ್ ಠಮಕೆ ನಿರೂಪಣೆ ಮಾಡಿ ವಂದಿಸಿದರು. ಅಮೃತ ಮಹೋತ್ಸವ ನಿಮಿತ್ತ ಲೋಗೋ ಬಿಡುಗಡೆ ಮಾಡಲಾಯಿತು.
ಸ್ವಾಗತ ಸಮಿತಿ ರಚನೆ: ಸಭೆಯಲ್ಲಿ ಎಲ್ಲ ಭಕ್ತರ ಸಮ್ಮುಖದಲ್ಲಿ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಅಮೃತ ಮಹೋತ್ಸವ ಸಮಿತಿ ರಚಿಸಲಾಯಿತು. ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ಮಾಜಿ ಶಾಸಕ ಪ್ರಕಾಶ ಖಂಡ್ರೆ, ಅಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಇಬ್ಬರನ್ನು ಉಭಯ ಪೂಜ್ಯರು ಸನ್ಮಾನಿಸಿದರು.
ಬಸವಣ್ಣನವರ ಕೃಪೆ, ಶತಾಯುಷಿ ಲಿಂಗೈಕ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ಆಶೀರ್ವಾದ ಶಕ್ತಿಯಿಂದ ಸಮಾಜದಲ್ಲಿ ಒಂದಿಷ್ಟು ಒಳ್ಳೆಯ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದೇನೆ. ಅನುಭವ ಮಂಟಪದಲ್ಲಿ ನಿರಂತರ ದಾಸೋಹ ನಡೆಯಬೇಕು. ಕೊನೆಯುಸಿರು ಇರುವವರೆಗೂ ಬಸವತತ್ವ ಪ್ರಚಾರ ಪ್ರಸಾರ ಮಾಡುತ್ತೇನೆ.
| ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ
ಶ್ರೀ ಡಾ.ಬಸವಲಿಂಗ ಪಟ್ಟದ್ದೇವರಿಗೆ ೭೫ ತುಂಬುತ್ತಿರುವುದು ಸಂತಸ ತರಿಸಿದೆ. ಜನ್ಮದಿನದ ಸವಿನೆನಪಿಗಾಗಿ ಆಚರಿಸಲು ಉದ್ದೇಶಿಸಿರುವ ಅಮೃತ ಮಹೋತ್ಸವ ಅರ್ಥಪೂರ್ಣವಾಗಿಸಲು ಅಗತ್ಯ ಸಹಾಯ, ಸಹಕಾರದೊಂದಿಗೆ ತನು, ಮನ, ಧನದಿಂದ ಸಹಕರಿಸುವೆ.
| ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ