ಜಿಲ್ಲೆ

ಅದೃಷ್ಟ, ಅವಕಾಶಗಳ ಜತೆ ಪ್ರತಿಭೆ ಇದ್ರೆ ಯಶಸ್ಸು, ಚಲನಚಿತ್ರ ನಟ ರವಿಶಂಕರ್ ಅಭಿಮತ

ಚಿಕ್ಕಬಳ್ಳಾಪುರ : ಪ್ರತಿಭೆಯಿಲ್ಲದಿದ್ದಲ್ಲಿ ಯಶಸ್ಸು ಅಸಾಧ್ಯ ಎಂದು ನಟ ರವಿಶಂಕರ್ ತಿಳಿಸಿದರು.

ನಗರದ ಸಿವಿವಿ ಕ್ಯಾಂಪಸ್‌ನಲ್ಲಿ ಶನಿವಾರ ಕೆ.ವಿ.ಇಂಗ್ಲಿಷ್ ಶಾಲಾ ವಾರ್ಷಿಕೋತ್ಸ ಉದ್ಘಾಟಿಸಿ ಮಾತನಾಡಿದರು.

ಅದೃಷ್ಟ ಹಾಗೂ ಅವಕಾಶಗಳ ಜತೆಗೆ ಪ್ರತಿಭೆ ಇರಬೇಕು., ಆಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನದೊಂದಿಗೆ ಕೀರ್ತಿ ಲಭಿಸುತ್ತದೆ ಎಂದರು.ಪ್ರತಿಯೊಬ್ಬರು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಆಸಕ್ತಿದಾಯಕ ಯಾವುದೇ ಕ್ಷೇತ್ರವಾದರೂ ಕಠಿಣ ಪರಿಶ್ರಮದಿಂದ ನಿಗದಿತ ಗುರಿ ಸಾಧಿಸಬೇಕು ಎಂದರು.

ಚಿಕ್ಕಬಳ್ಳಾಪುರ ಶೈಕ್ಷಣಿಕವಾಗಿ ಮುಂದುವರೆಯಲು ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಸಂಸ್ಥಾಪಕ ಅಧ್ಯಕ್ಷ ದಿವಂಗತ ಸಿ.ವಿ. ವೆಂಕಟರಾಯಪ್ಪ ಕಾಳಜಿ ಪ್ರಮುಖ ಕಾರಣ. ಇಲ್ಲಿನ ಗ್ರಾಮೀಣ ಪ್ರದೇಶದ ಜನರ ಅಭಿವೃದ್ಧಿಗಾಗಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಇತ್ತೀಚಿನ ದಿನಗಳಲ್ಲಿ ಮಕ್ಕಳು ಮತ್ತು ಪಾಲಕರ ನಡುವಿನ ಬಾಂಧವ್ಯ ಕಡಿಮೆಯಾಗುತ್ತಿದೆ. ಮಕ್ಕಳು ಜನರೊಂದಿಗೆ ಬೆರೆಯುವುದರ ಬದಲಿಗೆ ಮೊಬೈಲ್, ಟಿವಿ, ಕಂಪ್ಯೂಟರ್ ಎದುರು ಕಾಲಹರಣ ಮಾಡಲಾಗುತ್ತಿದೆ ಎಂದು ರಾಜ್ಯ ಐಸಿಎಸ್‌ಇ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ಡಾ.್ಲಾರೆನ್ಸ್ ಐವಾನ್ ಡಿಸೋಜಾ ಬೇಸರ ವ್ಯಕ್ತಪಡಿಸಿದರು.

ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ದೇಶಭಕ್ತಿ, ಕಲೆ ಮತ್ತು ಸಂಸ್ಕೃತಿ, ಮಾನವೀಯ ಮೌಲ್ಯಗಳ ಅರಿವು ಮೂಡಿಸಬೇಕು. ಶಿಕ್ಷಕರು ಮತ್ತು ಪಾಲಕರು ಮಕ್ಕಳೊಂದಿಗೆ ಸ್ನೇಹಭಾವದಿಂದ ಬೆರತು ಉತ್ತಮ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.ಮಕ್ಕಳಲ್ಲಿನ ಸುಪ್ತ ಪ್ರತಿಭೆ ಹೊರತೆಗೆಯಲು ಪೂರಕವಾದ ಕ್ರಿಯಾಶೀಲ ಚಟುವಟಿಕೆ ಕೈಗೊಳ್ಳಬೇಕು ಎಂದು ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷ ಕೆ.ವಿ.ನವೀನ್‌ಕಿರಣ್ ತಿಳಿಸಿದರು.ಶಿಕ್ಷಣದ ದತ್ತಿ ಸದಸ್ಯರಾದ ಬಿ.ಮುನಿಯಪ್ಪ, ಯಾಸೀನ್‌ಖಾನ್, ನಿರ್ಮಲಾ ಪ್ರಭು, ಆಡಳಿತಾಧಿಕಾರಿ ಡಾ ಸಾಯಿಪ್ರಭು, ಪ್ರಾಂಶುಪಾಲ ಎ. ತ್ಯಾಗರಾಜ್ ಇತರರಿದ್ದರು.

ಗಮನ ಸೆಳೆದ ಕಾರ್ಯಕ್ರಮ : ವಿದ್ಯಾರ್ಥಿಗಳಿಂದ ಯಕ್ಷಗಾನ, ಜಾನಪದ, ಸಿನಿಮಾ ಗೀತೆಗಳ ನೃತ್ಯ ಸೇರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.