ಮಾಲೀಕರ ಸಂಘ ಒತ್ತಾಸೆ ಜಿಲ್ಲಾಧಿಕಾರಿ ಕಚೇರಿ ಬಳಿ ಹರತಾಳ
ಚಿತ್ರದುರ್ಗ: ಗುತ್ತಿಗೆ ಪ್ರದೇಶದಿಂದ ಕಬ್ಬಿಣದ ಅದಿರು ಸಾಗಾಟಕ್ಕೆ ಲಾರಿಗಳನ್ನು ಬಳಸದಿರುವುದನ್ನು ವಿರೋಧಿಸಿ ಚಿತ್ರದುರ್ಗ ಅದಿರು ಮತ್ತು ಸರಕು ಸಾಗಾಣಿಕೆ ಲಾರಿ ಮಾಲೀಕರ ಸಂಘದ ಸದಸ್ಯರು, ನಗರದ ವೀರವನಿತೆ ಒನಕೆ ಓಬವ್ವ ವೃತ್ತದ ಬಳಿ ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರ 2ನೇ ದಿನ ಪೂರೈಸಿತು.
ಅಂದಿನ ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಅಧ್ಯಕ್ಷತೆಯಲ್ಲಿ 2013 ಜುಲೈ 4ರಂದು ನಡೆದಿದ್ದ ಅಧಿಕಾರಿಗಳ ಸಭೆಯಲ್ಲಿ ಹಿರೇಗುಂಟನೂರು ಹೋಬಳಿ ಬೆದರು ಬೊಮ್ಮೇನಹಳ್ಳಿ ಮತ್ತು ಮೇಗಳಹಳ್ಳಿ ಗಣಿ ಗುತ್ತಿಗೆ ಪ್ರದೇಶದ ಅದಿರಲ್ಲಿ ಶೇ.30 ಲಾರಿ ಮೂಲಕ ಹಾಗೂ ಉಳಿದ ಶೇ.70ನ್ನು ರೈಲು ಮೂಲಕ ಸಾಗಿಸಬೇಕೆಂದು ತೀರ್ಮಾನಿಸಲಾಗಿತ್ತು.
ಆದರೆ, ಈ ನಿರ್ಧಾರ ಕೈಬಿಟ್ಟು ರೈಲು ಮೂಲಕ ಎಲ್ಲ ಅದಿರನ್ನು ಸಾಗಿಸುತ್ತಿರುವುದರಿಂದಾಗಿ, ಸಾಲ ಮಾಡಿ ಲಾರಿ ಖರೀದಿಸಿರುವ ಮಾಲೀಕರು ಸಾಲದ ಮಾಸಿಕ ಕಂತು ಭರಿಸಲಾಗದೆ ಪರದಾಡುವಂತಾಗಿದೆ ಎಂದು ಅಳಲು ತೋಡಿಕೊಂಡರು.
ಸಂಘದ ಅಧ್ಯಕ್ಷ ಎಂ.ಡಿ.ಅಶ್ವಖ್ ಆಲಿ, ಕಾರ‌್ಯದರ್ಶಿ ಬಿ.ನಾಗರಾಜಪ್ಪ, ಸೈಯದ್ ಅನೀಸ್, ಮಹಮ್ಮದ್ ಇಮ್ರಾನ್, ಅಜೀಜ್, ಮನೋಜ್, ಸಾಧಿಕ್ ಮತ್ತಿತರರು ಇದ್ದರು.