ಚಿತ್ರದುರ್ಗ: ಚಳ್ಳಕೆರೆ ರೈಲ್ವೆ ನಿಲ್ದಾಣ ಮೂಲಕ ಅದಿರು ಸಾಗಾಟ ಸ್ಥಗಿತ ಕೋರಿ ಇಲಾಖೆಗೆ ಪತ್ರ ಬರೆಯುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಚಳ್ಳಕೆರೆ ರೈಲ್ವೆ ಯಾರ್ಡ್ ಬಳಿ ಅದಿರು ಸಾಗಾಟದ ಧೂಳಿನಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಡಿಸಿ ಕಚೇರಿಯಲ್ಲಿ ಶುಕ್ರವಾರ ಅಧಿಕಾರಿಗಳ ಹಾಗೂ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದರು.
ರೈಲು ನಿಲ್ದಾಣದಲ್ಲಿ ಅದಿರು ಲೋಡ್, ಅನ್‌ಲೋಡ್‌ನಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹೆಚ್ಚಿನ ಸಂಖ್ಯೆ ಹಾಗೂ ಅಧಿಕ ಸಾಮರ್ಥ್ಯದ ಲಾರಿಗಳ ಓಡಾಟದಿಂದ ಅಪಾಯದ ಸ್ಥಿತಿ ನಿರ್ಮಾಣವಾಗಿದೆ ಎಂಬ ದೂರುಗಳಿವೆ.
ಪರಿಸರ ಅಧಿಕಾರಿಗಳಿಗೆ ಸ್ಥಳ ಪರಿಶೀಲಿಸಿ ವಾರದೊಳಗೆ ವರದಿ ಸಲ್ಲಿಸಲು ಸೂಚಿಸಿದ್ದೇನೆ. ಇದನ್ನು ಆಧರಿಸಿ ರೈಲ್ವೆ ಇಲಾಖೆಗೆ ಪತ್ರ ಬರೆದು ಅದಿರು ಸಾಗಾಟ ಸ್ಥಗಿತಕ್ಕೆ ಮನವಿ ಮಾಡಲಾಗುವುದು. ರೈಲ್ವೆ ಸಚಿವ ವಿ.ಸೋಮಣ್ಣ ಅವರೊಂದಿಗೂ ಮಾತನಾಡಿ, ಸಮಸ್ಯೆ ಪರಿಹರಿಸಲು ಪ್ರಯತ್ನಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.
ತಾತ್ಕಾಲಿಕವಾಗಿ ಅದಿರು ಸಾಗಟ ಸ್ಥಗಿತ
ಅದಿರು ಸಾಗಾಟದಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಉಪವಿಭಾಗಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ, ಲೋಕೋಪಯೋಗಿ, ಪ್ರಾದೇಶಿಕ ಸಾರಿಗೆ, ಚಳ್ಳಕೆರೆ ನಗರಸಭೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಉಪ ಸಮಿತಿ ರಚನೆಗೆ ಡಿಸಿ ಸೂಚಿಸಿದರು.
ಈ ಉಪ ಸಮಿತಿ ನಿಯಮಾನುಸಾರ ಅದಿರು ಸಾಗಾಣಿಕೆ ಮಾಡಲಾಗುತ್ತಿದೆಯೇ ಎಂಬುದರ ಪರಿಶೀಲಿಸುವುದರ ಜತೆಗೆ,ಪರ್ಯಾಯ ಮಾರ್ಗಗಳ ಕುರಿತು ಸಲಹೆ ಸೂಚನೆಗಳನ್ನು ಒಂದು ವಾರದಲ್ಲಿ ನೀಡಲಿದೆ. ಈ ಸಮಯದಲ್ಲಿ ತಾತ್ಕಾಲಿಕವಾಗಿ ಅದಿರು ಸಾಗಾಟ ಸ್ಥಗಿತಗೊಳಿಸುವಂತೆ ಪ್ರಕಾಶ್ ಸ್ಪಾಂಜ್ ಕಂಪನಿ ಪ್ರತಿನಿಧಿಗಳಿಗೆ ಸೂಚಿಸಿದರು.
ತಾವು ಸೋಮವಾರ ಸ್ಥಳಕ್ಕೆ ಭೇಟಿ ನೀಡುತ್ತೇನೆ. ಆದ್ದರಿಂದ ಧರಣಿ ನಿಲ್ಲಿಸುವಂತೆ ಮುಖಂಡರಿಗೆ ಜಿಲ್ಲಾಧಿಕಾರಿ ಕೋರಿದರು.
ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಸಿ ಮೆಹಬೂಬ್ ಜಿಲಾನಿ ಖುರೇಷಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ಎಂ.ಜೆ. ಮಹೇಶ್, ಪರಿಸರ ಅಧಿಕಾರಿ ಆಸಿಫ್‌ಖಾನ್, ನಗರಾಭಿವೃದ್ಧಿ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಚಳ್ಳಕೆರೆ ತಹಸೀಲ್ದಾರ್ ರೆಹಮಾನ್‌ಪಾಷ, ಲೋಕೋಪಯೋಗಿ ಇಲಾಖೆ ಇಇ ನಾಗರಾಜ್, ರೈಲ್ವೆ ಇಲಾಖೆ ಅಧಿಕಾರಿಗಳು, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಸೋಮಶೇಖರ್, ಶ್ರೀನಾಥ್, ಮುರುಳಿ, ಜಯಪಾಲಯ್ಯ ಇತರರು ಇದ್ದರು.