ಜಿಲ್ಲೆ

ಅಥಣಿ ಕ್ಷೇತ್ರ ಸಂಪೂರ್ಣ ನೀರಾವರಿ

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಪೂರ್ವ ಭಾಗದ ೯ ಕೆರೆಗಳನ್ನು ತುಂಬಿಸುವ ಯೋಜನೆಯ ಲೋಕಾರ್ಪಣೆ ಕಾರ್ಯಕ್ರಮ ಜು.೩ರಂದು ಬೆಳಗ್ಗೆ ೧೦ ಗಂಟೆಗೆ ಯಲ್ಲಮ್ಮವಾಡಿ ಕೆರೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಲಕ್ಶ್ಮಣ ಸವದಿ ಹೇಳಿದರು.

ಅಥಣಿ ತಾಲೂಕಿನ ಯಲ್ಲಮ್ಮವಾಡಿ ಕೆರೆಯಲ್ಲಿರುವ ಜಾಕ್‌ವೆಲ್ ಶನಿವಾರ ವೀಕ್ಷಿಸಿ, ಕಾರ್ಯಕ್ರಮ ಸ್ಥಳ ಪರಿಶೀಲಿಸಿ ಮಾತನಾಡಿದರು. ಈ ಕಾರ್ಯಕ್ರಮವನ್ನು ಜೂ.೩೦ರಂದು ಏರ್ಪಡಿಸಲು ತೀರ್ಮಾನಿಸಲಾಗಿತ್ತು. ಆದರೆ, ತಾಂತ್ರಿಕ ತೊಂದರೆಯಿಂದಾಗಿ ಜು.೩ಕ್ಕೆ ಆಯೋಜಿಸಲಾಗಿದೆ. ತಾಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ೧೪೦ ಕೋಟಿ ರೂ. ವೆಚ್ಚದಲ್ಲಿ ೯ ಗ್ರಾಮಗಳ ಕೆರೆ ತುಂಬಿಸುವ ಈ ಯೋಜನೆ ಕಾಮಗಾರಿ ಪೂರ್ಣಗೊಂಡಿದೆ. ಕೃಷ್ಣಾ ನದಿಯಿಂದ ಪೈಪ್‌ಲೈನ್ ಮೂಲಕ ಹರಿದು ಬರುವ ನೀರು ಯಲ್ಲಮ್ಮವಾಡಿ ಕೆರೆಯಲ್ಲಿ ಸಂಗ್ರಹವಾಗಲಿದೆ. ಬಳಿಕ ಜಾಕವೆಲ್‌ನಿಂದ ಬಾಡಗಿ, ಐಗಳಿ, ಪಡತರವಾಡಿ, ಕೋಹಳ್ಳಿ, ಅಡಹಳ್ಳಿ, ಅಡಹಳ್ಳಟ್ಟಿ, ಅರಟಾಳ ಗ್ರಾಮ ಸೇರಿ ಇತರ ಕೆರೆಗಳಿಗೆ ನೀರು ತಲುಪಲಿದೆ ಎಂದರು.

ಕೆಲಸ ಮಾಡಿದ ಸಂತೃಪ್ತಿ ನನಗಿದೆ: ಕರಿಮಸೂತಿ, ತುಂಗಳ-ಸಾವಳಗಿ, ಹಲ್ಯಾಳ ಹಾಗೂ ಅಮ್ಮಾಜೇಶ್ವರಿ ಕೊಟ್ಟಲಗಿ ಮತ್ತು ಕೆರೆ ತುಂಬುವ ಯೋಜನೆಗಳಿಂದ ಅಥಣಿ ಕ್ಷೇತ್ರ ಸಂಪೂರ್ಣ ನೀರಾವರಿಗೆ ಒಳಪಡಲಿದೆ. ರೈತರಿಗೆ ನೀರು ಕೊಟ್ಟರೆ ಜಗಕ್ಕೆಲ್ಲ ಅನ್ನ ನೀಡುವ ಸಾಮರ್ಥ್ಯ ಅವರಲ್ಲಿದೆ. ಈ ದಿಶೆಯಲ್ಲಿ ಕೆಲಸ ಮಾಡಿದ ಸಂತೃಪ್ತಿ ನನಗಿದೆ. ತಾಲೂಕಿನ ರೈತರ ಸಮ್ಮುಖದಲ್ಲಿ ಸರಳವಾಗಿ, ವಿಧಿ-ವಿಧಾನ ಪೂರ್ವಕವಾಗಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಸಂತೋಷ ಗಾಣಗೇರ, ರಾಹುಲ ಪೂಜಾರಿ, ಮಹಾದೇವ ಚವ್ಹಾಣ, ರಮೇಶ ಗಾಣಗೇರ, ಅಪ್ಪಾಸಾಹೇಬ ನಾಯಿಕ, ಪರುಶುರಾಮ ಚವ್ಹಾಣ ಇತರರಿದ್ದರು.