ಜಿಲ್ಲೆ

ಅತ್ಯುತ್ತಮ ಫಲಿತಾಂಶಕ್ಕೆ ಉತ್ತಮ ಬೋಧನೆ ಅಗತ್ಯ

ಚಿತ್ರದುರ್ಗ: ತಮ್ಮಲ್ಲಿರುವ ಕೌಶಲ, ಪರಿಣಿತಿಯಿಂದ ವಿದ್ಯಾರ್ಥಿಗಳಿಗೆ ಮನವರಿಕೆಯಾಗುವಂತೆ ಬೋಧಿಸಿದಾಗ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ಶಿಕ್ಷಕರಿಗೆ ಸಲಹೆ ನೀಡಿದರು.

ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಇಂಗ್ಲಿಷ್ ಶಿಕ್ಷಕರ ಕ್ಲಬ್ ವುಗಳ ಸಹಯೋಗದಲ್ಲಿ ಜಿಲ್ಲೆಯ ಪ್ರೌಢಶಾಲಾ ಇಂಗ್ಲಿಷ್ ಶಿಕ್ಷಕರಿಗೆ ನಗರದ ತರಾಸು ರಂಗಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಇಂಗ್ಲಿಷ್ ವಿಷಯದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಉತ್ತಮ ಫಲಿತಾಂಶಕ್ಕೆ ಸಂಬಂಧಿಸಿದಂತೆ ಶಿಕ್ಷಕರ ಮೇಲೆ ಒತ್ತಡವಿರುವುದು ನಿಜ. ಆದರೆ, ಅದನ್ನು ಎಂದಿಗೂ ಒತ್ತಡ ಎಂದುಕೊಳ್ಳಬಾರದು. ಸಂಸ್ಕಾರವಂತ ಮಕ್ಕಳನ್ನು ಸಮಾಜಕ್ಕೆ ಕೊಡುವ ಅವಕಾಶ ಶಿಕ್ಷಕರ ಕೈಯಲ್ಲಿದೆ. 10ನೇ ತರಗತಿಗೆ ಬಂದಾಗ ಫಲಿತಾಂಶ ಸುಧಾರಣೆಯತ್ತ ಗಮನ ಕೊಡುವ ಬದಲು 8ನೇ ತರಗತಿಯಿಂದಲೇ ಅವರನ್ನು ತಯಾರು ಮಾಡಬೇಕು ಎಂದರು.

ಎಲ್ಲರಲ್ಲೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ಜವಾಬ್ದಾರಿ ಪಾಲಕರು, ಶಿಕ್ಷಕರ ಮೇಲಿದೆ. ಗಣಿತ, ಇಂಗ್ಲಿಷ್ ಕಷ್ಟ ಎನ್ನುವ ಆತಂಕವನ್ನು ವಿದ್ಯಾರ್ಥಿಗಳ ಮನಸ್ಸಿನಿಂದ ದೂರ ಮಾಡಬೇಕಾಗಿದೆ. ಮಕ್ಕಳ ಸಾಮರ್ಥ್ಯ ಅರಿತು ಇಂಗ್ಲಿಷ್ ಬೋಧಿಸಬೇಕು ಎಂದು ತಿಳಿಸಿದರು.

ಡಿಡಿಪಿಐ ಎಂ.ಆರ್. ಮಂಜುನಾಥ್ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಉತ್ತಮ ಫಲಿತಾಂಶ ಬರಬೇಕಾದರೆ ಭಾಷಾವಾರು ಕಾರ್ಯಾಗಾರಗಳು ಅನುಕೂಲವಾಗುತ್ತವೆ. ಗುಣಮಟ್ಟದ ಶಿಕ್ಷಣ ನೀಡಿ ಪರೀಕ್ಷೆಗೆ ಅಣಿಗೊಳಿಸಿದಾಗ ಫಲಿತಾಂಶದಲ್ಲಿ ಸುಧಾರಣೆ ಸಾಧ್ಯವಾಗಲಿದೆ ಎಂದರು.

ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕ ಹನುಮಂತರಾಯಪ್ಪ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಬೆಳಗಾವಿಯ ಅಲ್ತಾ ಫ್‌ಜಹಾಂಗೀರ್ ಉಪನ್ಯಾಸ ನೀಡಿದರು.

ವಿದ್ಯಾಧಿಕಾರಿಗಳಾದ ಎನ್.ಆರ್. ತಿಪ್ಪೇಸ್ವಾಮಿ, ಸಿದ್ದಪ್ಪ, ಬಿಇಒ ಎಸ್. ನಾಗಭೂಷಣ್, ಡಿವೈಪಿಸಿ ವೆಂಕಟೇಶ್, ವಿಷಯ ಪರಿವೀಕ್ಷಕ ರಾದ ಶಿವಣ್ಣ, ಗೋವಿಂದಪ್ಪ, ಚಂದ್ರಣ್ಣ, ಪ್ರಶಾಂತ್, ಮಹಾಲಿಂಗಪ್ಪ, ಶಿವಣ್ಣ, ಸಂಪತ್, ಕ್ಲಬ್ ಅಧ್ಯಕ್ಷ ಸಿ.ಬಿ. ಸಿದ್ದೇಶ್, ತಾಲೂಕು ಅಧ್ಯಕ್ಷ ಎಸ್. ಗುರುಮೂರ್ತಿ, ಆಂಗ್ಲ ಭಾಷಾ ವಿಷಯ ಪರಿವೀಕ್ಷಕ ಎಚ್.ಟಿ. ಚಂದ್ರಣ್ಣ, ರಾಜ್ಯಸರ್ಕಾರಿ ನೌಕರರ ಸಂಘದ ಸದಸ್ಯ ಎಸ್. ರಾಜಪ್ಪ, ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣ ಇತರರಿದ್ದರು.