ಜಿಲ್ಲೆ

ಅತ್ಯಾಚಾರಿಗೆ 35 ವರ್ಷ ಜೈಲು

ಕಲಬುರಗಿ: ನಗರದ ವಿಶ್ವವಿದ್ಯಾಲಯ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ೩೫ ವರ್ಷ ಜೈಲು ಶಿಕ್ಷೆ, ೨೦ ಸಾವಿರ ರೂ. ದಂಡ ವಿಧಿಸಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಆದೇಶಿಸಿದ್ದಾರೆ. ನಗರದ ಉಮರ್ ಕಾಲನಿಯ ಮಹ್ಮದ್ ಸಾದಿಕ್ ಸಿದ್ದಿಕಿ (೨೦) ಅಪರಾಧಿ. ಅಪ್ರಾಪ್ತ ಬಾಲಕಿಯನ್ನು ಮದುವೆ ಆಗುತ್ತೇನೆ ಎಂದು ಒತ್ತಾಯಿಸಿದ್ದು, ಬಾಲಕಿ ನಿರಾಕರಿಸಿದ್ದಾಳೆ. ಈ ಮಧ್ಯೆ ಬಾಲಕಿಯನ್ನು ಚಾಕು ತೋರಿಸಿ ಹೆದರಿಸಿ ನಗರದ ಹೊರವಲಯದ ಅಜಾದಪುರದ ಬಯಲು ಪ್ರದೇಶದಲ್ಲಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ೨೦೨೨ ಆಗಸ್ಟ್ ೧೭ರಂದು ಬಾಲಕಿಯ ಸಹೋದರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ, ಅಲ್ಲಿಗೆ ಬಂದು ಬೆದರಿಸಿ ಕರೆದೊಯ್ದು, ನಗರದ ರೈಲ್ವೆ ಅಂಡರ್ ಬ್ರಿಡ್ಜ್ ಬಳಿಯ ಕಂಟಿಗಳಲ್ಲಿ ಲೈಂಗಿಕ ದೌರ್ಜನ್ಯ ಎಸಗಿ, ಮನೆಗೆ ತಂದು ಬಿಟ್ಟಿದ್ದಾನೆ. ಪುನಃ ಬಾಲಕಿಯನ್ನು ಒತ್ತಾಯ ಮಾಡಿದ್ದಲ್ಲದೇ ಇತರರ ಜತೆ ಕೂಡಿ ಬಾಲಕಿ ಮನೆಗೆ ಆಗಮಿಸಿ, ಅವಳಿಗೆ ಹೊಡಿ ಬಡಿ ಮಾಡಿದ್ದಾರೆ. ಈ ಕುರಿತು ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಅರುಣ ಮುರಗುಂಡಿ ತನಿಖೆ ನಡೆಸಿ, ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್, ಅತ್ಯಾಚಾರಿಗೆ ೩೫ ವರ್ಷ ಜೈಲು ಶಿಕ್ಷೆ, ೨೦ ಸಾವಿರ ರೂ. ದಂಡ ವಿಧಿಸಿ, ಆದೇಶಿಸಿದ್ದಾರೆ. ಕಾನೂನು ಪ್ರಾಧಿಕಾರದಿಂದ ನೊಂದ ಬಾಲಕಿಗೆ ಐದು ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿದ್ದಾರೆ. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ. ತುಪ್ಪದ ವಾದ ಮಂಡಿಸಿದ್ದರು.