ಕಲಬುರಗಿ: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಅತ್ಯಾಚಾರಿಗೆ 30 ವರ್ಷ ಜೈಲು ಶಿಕ್ಷೆ, ಕೃತ್ಯಕ್ಕೆ ಸಹಕರಿಸಿದ ಸಹಚರರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಆದೇಶಿಸಿದ್ದಾರೆ.
ಅತ್ಯಾಚಾರಿ ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ಭೀಮಾಶಂಕರ ಅಂಬಿಗೇರ ಜೈಲು ಶಿಕ್ಷೆಗೆ ಒಳಗಾದವ. ೨೦೨೨ ಜೂನ್ ೪ರಂದು ಜೇವರ್ಗಿ ತಾಲೂಕಿನ ಬಿರಾಳ (ಕೆ) ಗ್ರಾಮದಲ್ಲಿನ ಜಮೀನಿನಲ್ಲಿ ಇದ್ದ ಬಾಲಕಿಯನ್ನು ಕಾರಿನಲ್ಲಿ ಅಪಹರಿಸಿಕೊಂಡು ಬಂದಿದ್ದಾರೆ. ಈ ಮಧ್ಯೆ ತಡೆದ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲಿಂದ ಅಫಜಲಪುರ ಪಟ್ಟಣದ ವ್ಯಾಪ್ತಿಯ ಕಬ್ಬಿನ ಹೊಲದಲ್ಲಿ ಕರೆದುಕೊಂಡು ಹೋಗಿ ಕೂಡಿ ಹಾಕಿದ್ದಾರೆ. ರಾತ್ರಿ ೧೧ಗಂಟೆ ಸುಮಾರಿಗೆ ಎರಡು ಬಾರಿ ಅತ್ಯಾಚಾರ ಎಸಗಲಾಗಿದೆ. ಮರುದಿನ ಅಳುತ್ತಿದ್ದ ಬಾಲಕಿಯನ್ನು ಅಫಜಲಪುರಕ್ಕೆ ಕರೆದುಕೊಂಡು ಬಂದಿದ್ದು, ಹೊಟೇಲ್‌ನಲ್ಲಿ ಉಪಹಾರ ಸೇವಿಸಲು ಇಳಿದಿದ್ದು, ಬಾಲಕಿ ಅತ್ಯಾಚಾರಿಯಿಂದ ತಪ್ಪಿಸಿಕೊಂಡು ಬಸ್‌ನಲ್ಲಿ ಕಲಬುರಗಿಗೆ ಬಂದು ಸಹೋದರನನ್ನು ಕರೆಸಿ, ಮನೆ ಸೇರಿದ್ದಳು.
ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಸಿಪಿಐ ಎಂ.ಶಿವಪ್ರಸಾದ ತನಿಖೆ ನಡೆಸಿ, ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಅತ್ಯಾಚಾರಿಗೆ ೩೦ ವರ್ಷ ಜೈಲು ಶಿಕ್ಷೆ, ೨೦ ಸಾವಿರ ದಂಡ, ನಾಲ್ವರು ಸಹಚರರಿಗೆ ಐದು ವರ್ಷ ಜೈಲು ಆರು ಸಾವಿರ ರೂ. ದಂಡ ವಿಧಿಸಿ, ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ತುಪ್ಪದ ವಾದಿಸಿದ್ದರು. ಬಾಲಕಿಗೆ ಕಾನೂನು ಪ್ರಾಧಿಕಾರದಿಂದ ಆರು ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಸುರೇಶ, ದರಿಯಪ್ಪ ನ್ಯಾಯಾಲಯಕ್ಕೆ ಸಾಕ್ಷಿಗಳನ್ನು ಹಾಜರುಪಡಿಸಿದ್ದರು.