ವಿಜಯವಾಣಿ ಸುದ್ದಿಜಾಲ ಕಲಬುರಗಿ
ಹನ್ನೆರಡು ವರ್ಷದ ಬಾಲಕಿಯನ್ನು ದುಷ್ಕರ್ಮಿಗಳು ಅಪಹರಿಸಿ ಅತ್ಯಾಚಾರ ನಡೆಸಿದ್ದಲ್ಲದೆ ಕೊಲೆ ಮಾಡಿ ಶವವನ್ನು ಬಾವಿಯಲ್ಲಿ ಬಿಸಾಕಿದ ಅಮಾನವೀಯ ಘಟನೆ ಆಳಂದ ತಾಲೂಕಿನ ನಿಂಬರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿದೆ.
ಶನಿವಾರ ಬಾಲಕಿ ಪುಸ್ತಕವೊಂದನ್ನು ತರಲು ಮನೆಯಿಂದ ಹೊರ ಹೋದವಳು ಮರಳಿ ಬಂದಿಲ್ಲ. ಪಾಲಕರು, ಮನೆಯವರು ಹುಡುಕಾಡಿದರೂ ಸಿಗಲಿಲ್ಲ. ಸೋಮವಾರ ಸಂಜೆ ದೇವಂತಗಿ-ಜವಳಿ ಸೀಮೆ ಬಾವಿಯೊಂದರಲ್ಲಿ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಅತ್ಯಾಚಾರ ನಡೆಸಿ ಕೊಲೆ ಮಾಡಿ ಬಾವಿಯಲ್ಲಿ ಬಿಸಾಕಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿ ಅರಿಯುತ್ತಲೇ ಎಸ್‌ಪಿ ಇಶಾ ಪಂತ್, ಡಿವೈಎಸ್‌ಪಿ ಗೋಪಿ ಆರ್., ಸಿಪಿಐ ಬಾಸು ಚವ್ಹಾಣ್, ಅಪರಾಧ ವಿಭಾಗದ ಪಿಎಸ್‌ಐ ದಿನೇಶ ಟಿ., ಬಸವರಾಜ ಸಣ್ಣಮನಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತು. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.
(ಬಾಕ್ಸ್)
ಕಲಬುರಗಿಯಲ್ಲಿ ಮಿಂಚಿನ ಪ್ರತಿಭಟನೆ
ಅತ್ಯಾಚಾರ ಮಾಡಿ ಕೊಲೆಗೈದವರನ್ನು ಕೂಡಲೇ ಬಂಧಿಸುವAತೆ ಒತ್ತಾಯಿಸಿ ಕಲಬುರಗಿ ಜಿಮ್ಸ್ ಆಸ್ಪತ್ರೆ ಎದುರಿನ ಸೇಡಂ ಮುಖ್ಯ ರಸ್ತೆಯಲ್ಲಿ ಸೋಮವಾರ ರಾತ್ರಿ ಸಂಚಾರ ತಡೆದು ಕುರುಬ ಸಮಾಜ ಮಿಂಚಿನ ಪ್ರತಿಭಟನೆ ನಡೆಸಿತು. ಇದೊಂದು ಅಮಾನವೀಯ ಘಟನೆ. ಕಾಮುಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ಘಟನೆ ಮರುಕಳಿಸದಂತೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಹೋರಾಟದಲ್ಲಿ ಬಿಜೆಪಿ ಮುಖಂಡ ಹರ್ಷಾನಂದ ಗುತ್ತೇದಾರ್ ಇತರರು ಪಾಲ್ಗೊಂಡು ಬೆಂಬಲ ಸೂಚಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ರಾಚಪ್ಪ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಪ್ರಮುಖರಾದ ಭಗವಂತರಾಯ ಪಾಟೀಲ್, ಗುರುನಾಥ ಪೂಜಾರಿ, ರವಿ ಪೂಜಾರಿ ಜಂಬಗಾ, ಭೀಮಾಶಂಕರ ಮಾಡಿಯಾಳ, ಪರಮೇಶ್ವರ ಆಲಗೂಡ, ಶರಣು ಬೇಲೂರ, ಪ್ರಕಾಶ ಕುಸನೂರ ಇತರರಿದ್ದರು. ರಸ್ತೆತಡೆಯಿಂದಾಗಿ ಕೆಲಕಾಲ ವಾಹನ ಸಂಚಾರ ಅಸ್ಯವ್ಯಸ್ತಗೊಂಡಿತ್ತು.