ಜಿಲ್ಲೆ

ಅತ್ಯಾಚಾರ ಆರೋಪಿ ಕಾರ್ತಿಕ್‌ಗೆ ನ್ಯಾಯಾಂಗ ಬಂಧನ

ಮೈಸೂರು: ದಸರಾ ಹಿನ್ನೆಲೆಯಲ್ಲಿ ಮೈಸೂರಿಗೆ ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಬಳಿಕ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದ ಆರೋಪಿ ಕಾರ್ತಿಕ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ದಸರಾ ಹಿನ್ನೆಲೆಯಲ್ಲಿ ನಗರಕ್ಕೆ ವಲಸೆ ಬಂದಿದ್ದ 10 ವರ್ಷದ ಅಪ್ರಾಪ್ತೆಯನ್ನು ಆರೋಪಿ ಮೈಸೂರು ಅರಮನೆ ಮುಂಭಾಗದ ದೊಡ್ಡಕೆರೆ ಮೈದಾನದ ಬಳಿ ಅ.9ರಂದು ಅಮಾನುಷವಾಗಿ ಅತ್ಯಾಚಾರ ಎಸಗಿ ಭೀಕರವಾಗಿ ಹತ್ಯೆಮಾಡಿದ್ದ.

ಬಳಿಕ ಪರಾರಿಯಾಗಿದ್ದ ಆರೋಪಿಯನ್ನು ಕೊಳ್ಳೇಗಾಲದಲ್ಲಿ ಬಂಧಿಸಲಾಗಿತ್ತು. ಈತನ ಊರಾದ ಸಿದ್ದಲಿಂಗಪುರದಿಂದ ಕರೆದುಕೊಂಡು ಬರುವಾಗ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಈತನ ಕಾಲಿಗೆ ಗುಂಡು ಹೊಡೆದಿದ್ದರು. ಬಳಿಕ ಕೆ.ಆರ್.ಆಸ್ಪತ್ರೆಯಲ್ಲಿ ದಾಖಲಾಗಿದ್ದ ಈತನಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು.

ಈತನ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ವರದಿ ನೀಡಿದ್ದಾರೆ. ವರದಿ ಆಧಾರದಲ್ಲಿ ಪೊಲೀಸರು ಈತನನ್ನು ಮೂರು ದಿನಗಳ ಕಾಲ ವಶಕ್ಕೆ ಪಡೆದಿದ್ದರು.

ಈ ಸಂದರ್ಭದಲ್ಲಿ ಈತ ಇನ್ನಾವುದಾದರೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಯೇ ಎಂಬುದರ ಕುರಿತು ವಿಚಾರಣೆಗೆ ಒಳಪಡಿಸಲಾಗಿತ್ತು. ಅವಧಿ ಮುಗಿದ ಬಳಿಕ ನಜರ್‌ಬಾದ್ ಠಾಣೆಯ ಪೊಲೀಸರು ಈತನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ನ್ಯಾಯಾಧೀಶರು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಗುಂಡೇಟಿನಿಂದ ಈತನ ಬಲಗಾಲಿನಲ್ಲಿ ಗಾಯವಾಗಿದ್ದು, ಯಾವುದೇ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಈತನಿಗೆ ಕಾರಾಗೃಹದಲ್ಲೇ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.