ಬಾಗಲಕೋಟೆ ನಗರದ ಬಿವಿವಿ ಸಂಘದ ಹೋಮಿಯೋಪಥಿಕ್ ಕಾಲೇಜಿನಿಂದ ಎಸ್‌ಎನ್‌ಎಂ ಶತಾಬ್ದಿ ಭವನದಲ್ಲಿ ಹಮ್ಮಿಕೊಂಡಿರುವ ಹೋಮಿಯೋಪಥಿಕ್ ರಾಷ್ಟ್ರೀಯ ಸಮ್ಮೇಳನ ದೆಹಲಿಯ ಆಯುಷ್ ನಿರ್ದೇಶಕ ಡಾ.ರಾಜ್ ಕೆ.ಮಂಚಂದಾ ಉದ್ಘಾಟಿಸಿದರು. ರಾಜೀವ್ ಗಾಂಧಿ ವಿವಿ ರೆಜಿಸ್ಟ್ರಾರ್ ಡಾ.ಎನ್.ರಾಮಕೃಷ್ಣಾರೆಡ್ಡಿ, ಬಿವಿವಿ ಸಂಘಧ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ, ಪ್ರಾಂಶುಪಾಲ ಡಾ.ಅರುಣ ಹೂಲಿ ಇದ್ದಾರೆ.  
ಜಿಲ್ಲೆ

ಅತ್ಯಂತ ಸುರಕ್ಷಿತ ವೈದ್ಯಕೀಯ ಪದ್ಧತಿ

ಬಾಗಲಕೋಟೆ: ವಿಶ್ವದಲ್ಲಿ ಅತೀ ಹೆಚ್ಚು ಜನರು ಉಪಯೋಗಿಸುವ ಎರಡನೇ ವೈದ್ಯಕೀಯ ಚಿಕಿತ್ಸಾ ಪದ್ಧತಿ ಹೋಮಿಯೋಪಥಿಕ್. ಅತ್ಯಂತ ಸುರಕ್ಷಿತವಾಗಿದೆ ಎಂದು ದೆಹಲಿಯ ಆಯುಷ್ ನಿರ್ದೇಶಕ ಡಾ.ರಾಜ್ ಕೆ.ಮಂಚಂದಾ ಹೇಳಿದರು.
ನಗರದ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಶತಾಬ್ಧಿ ಭವನದಲ್ಲಿ ಶನಿವಾರ ಬಿವಿವಿ ಸಂಘದ ಹೋಮಿಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯದ ಆಶ್ರಯದಲ್ಲಿ ಪ್ರಥಮ ಬಾರಿಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಹೋಮಿಯೋಪತಿ ವೈದ್ಯ ಪದ್ದತಿ ಅತೀ ಹೆಚ್ಚು ಜನ ಉಪಯೋಗಿಸುವ ಪ್ರಪಂಚದ ಎರಡನೇ ವೈದ್ಯಕೀಯ ಪದ್ಧತಿಯಾಗಿದೆ. ಇದು ಅನಾದಿಕಾಲದಿಂದ ಬಂದಿದೆ. ಈ ಪದ್ದತಿ ಹಾಗೂ ಹೋಮಿಯೋಪತಿ ವೈದ್ಯ ಪದ್ದತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಜಾಗತಿಕವಾಗಿ ಸಾಕಷ್ಟು ಸವಾಲುಗಳನ್ನು ಎದರುಸುತ್ತಿದ್ದಾರೆ ಎಂದರು.
ಸವಾಲುಗಳ ನಡುವೆ ವೈದ್ಯರು ಅನೇಕ ಗುಣಮುಖವಾಗದ ಖಾಯಿಲೆಗಳನ್ನು ಗುಣ ಪಡಿಸಿದ ಉದಾಹರಣೆಗಳಿವೆ. ಇದು ಅತ್ಯಂತ ಪವಿತ್ರ ಮತ್ತು ಶ್ರೇಷ್ಠ ವೈದ್ಯ ಪದ್ಧತಿಯಾಗಿದೆ. ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುವ ಅವಶ್ಯವಿದೆ. ಹೋಮಿಯೋಪಥಿ ವೈದ್ಯ ಪದ್ಧತಿಯು ೨೧ನೇ ಶತಮಾನದ ಸುರಕ್ಷಿತ ಮತ್ತು ಮುಂದವರಿದ ಚಿಕಿತ್ಸಾ ಪದ್ಧತಿಯಾಗಿದ್ದು, ಹೋಮಿಯೋಪಥಿ ಕಾಲೇಜುಗಳಲ್ಲಿ ಶಿಕ್ಷಣದ ಜತೆಗೆ ಸಂಶೋಧನೆಗೆ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.
ಸಾಮಾನ್ಯ ವೈದ್ಯಕೀಯ ಪದವಿ ಪಡೆದವರಿಗೂ ಮುಂದವರಿದ ರಾಷ್ಟ್ರಗಳಲ್ಲಿ ಹೋಮಿಯೋಪಥಿಯಲ್ಲಿ ಡಿಪ್ಲೋಮಾ ಕೋರ್ಸ್ಗಳನ್ನು ಆರಂಭಿಸಲಾಗಿದೆ. ಯುಕೆ, ಫ್ರಾನ್ಸ್, ಜರ್ಮನಿ, ಆಸ್ಟ್ರೀಯಾ, ಬ್ರೇಜಿಲ್ ಹಾಗೂ ಯುಎಸ್ ಸೇರಿ ಹಲವು ರಾಷ್ಟ್ರಗಳಲ್ಲಿ ಹೋಮಿಯೋಪಥಿ ಚಿಕಿತ್ಸಾ ಪದ್ಧತಿಗೆ ಮೊದಲ ಆದ್ಯತೆ ಇದೆ ಎಂದರು.
ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ರಜಿಸ್ಟಾರ್ ಡಾ.ಎನ್.ರಾಮಕೃಷ್ಣ ರೆಡ್ಡಿ ಮಾತನಾಡಿ, ಹೋಮಿಯೋಪಥಿ ವೈದ್ಯ ಶಿಕ್ಷಣ ಕೂಡ ವೈದ್ಯಕೀಯ ಪದವಿಯಂತೆಯೇ ಪಠ್ಯಕ್ರಮ ಹೊಂದಿದೆ. ಪಾಲಕರು ತಮ್ಮ ಮಕ್ಕಳಿಗೆ ಹೋಮಿಯೋಪಥಿಕ್ ಶಿಕ್ಷಣ ಕೊಡಿಸಲು ಮುಂದಾಗಬೇಕು. ಸರ್ಕಾರಗಳು ಹೋಮಿಯೋಪಥಿಕ್ ವೈದ್ಯ ಪದ್ದತಿಗೆ ಮನ್ನಣೆ ನೀಡಿ, ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೋಮಿಯೋಪಥಿಕ್ ವೈದ್ಯರನ್ನು ನೇಮಕ ಮಾಡಬೇಕು ಎಂದರು.
ಸಮ್ಮೇಳನದಲ್ಲಿ ಹೋಮಿಯೋಪತಿ ಪೀತಾಮಹ ಡಾ.ಸಾ ಮುಯಲ್ ಹಾನಿಮನರ್ ಮೂರ್ತಿಗೆ ಪುಷ್ಪ ಅರ್ಪಿಸಲಾಯಿತು. ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ೧೧೫೦ ಪ್ರತಿನಿಧಿಗಳು , ಸಂಶೋಧನಾ ಪರಿಣಿತರು, ಪ್ರಾಧ್ಯಾಪಕರು, ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಹೋಮಿಯೋಪಥಿಕ್ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ, ಕಾಲೇಜಿನ ಪ್ರಾಂಶುಪಾಲ ಡಾ.ಅರುಣ ಹೂಲಿ ವೇದಿಕೆಯಲ್ಲಿದ್ದರು. ಡಾ.ರೇಖಾ ಕೂಗನೂರ ಸ್ವಾಗತಿಸಿದರು, ಡಾ.ರವಿ ಕೊಟಣ್ಣವರ ವಂದಿಸಿದರು, ಡಾ. ಮಿಲಿಂದ್ ಮತ್ತು ಡಾ. ನಿಧಿ ಬೆಳಗಾಂವಕರ ನಿರೂಪಿಸಿದರು.