ಸುರೇಶ ಲೇಂಗಟಿ ಕಮಲಾಪುರ
ಸೊಸೆ ಅಧ್ಯಕ್ಷೆಯಾಗಿ ಅಧಿಕಾರಕ್ಕೇರಿದರೆ, ಅತ್ತೆ ಸಫಾಯಿ ಕರ್ಮಚಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಳೆ. ಇಂತದ್ದೊಂದು ಅಪರೂಪದ ಸನ್ನಿವೇಶಕ್ಕೆ ಮಹಾಗಾಂವ್ ಗ್ರಾಮ ಪಂಚಾಯಿತಿ ಶುಕ್ರವಾರ ಸಾಕ್ಷಿಯಾಯಿತು.
೨೪ ಸದಸ್ಯರ ಬಲ ಹೊಂದಿರುವ ಮಹಾಗಾಂವ್ ಗ್ರಾಮ ಪಂಚಾಯಿತಿಗೆ ಎರಡನೇ ಅವಧಿಗಾಗಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು. ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್‌ಸಿ ವರ್ಗಕ್ಕೆ ಮೀಸಲಾಗಿತ್ತು. ಎರಡೂ ಸ್ಥಾನಗಳಿಗೆ ಮನೀಷಾ ಹರಸೂರಕರ್ ಹಾಗೂ ಸಂಗೀತಾ ಮಲ್ಲಿಕಾರ್ಜುನ ಹೊರತು ಪಡಿಸಿ ಬೇರಾರು ನಾಮಪತ್ರ ಸಲ್ಲಿಸಿರಲಿಲ್ಲ. ಹೀಗಾಗಿ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು. ಮನೀಷಾ ಹರಸೂರಕರ್ ಎರಡನೇ ಬಾರಿಗೆ ಅಧ್ಯಕ್ಷ ಗಾದಿಗೇರಿದರು.
ಮನೀಷಾ ಅವರ ಅತ್ತೆ ಜಗದೇವಿ ದಶರಥ ಮಹಾಗಾಂವ್ ಗ್ರಾಮ ಪಂಚಾಯಿತಿಯಲ್ಲಿ ಕಳೆದ ೨೦ ವರ್ಷದಿಂದ ಸಫಾಯಿ ಕರ್ಮಚಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಬರುವ ಸಂಬಳದಿಂದಲೇ ಜೀವನ ನಡೆಸುತ್ತಿದ್ದರು. ಇದೀಗ ಇದೇ ಗ್ರಾಪಂಗೆ ಮನೀಷಾ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ವಿಶೇಷ. ಇನ್ನು ಜಗದೇವಿ ಅವರ ಅತ್ತೆ ಸಿದ್ದಮ್ಮ ಎಂಬುವವರೂ ಜೀವನ ಪರ್ಯಂತ ಸಫಾಯಿ ಕರ್ಮಚಾರಿಯಾಗಿ ಕೆಲಸ ಮಾಡಿದ್ದರು.
ಚುನಾವಣಾಧಿಕಾರಿಯಾಗಿ ಎಸ್.ಎಸ್.ಪಟ್ಟಣಶೆಟ್ಟಿ ಕರ್ತವ್ಯ ನಿರ್ವಹಿಸಿದರು. ಪಿಡಿಒ ಜಗದೇವಿ ಪವಾರ್ ಸಾಥ್ ನೀಡಿದರು. ಪ್ರಮುಖರಾದ ನಂದನಕುಮಾರ ಹರಸೂರಕರ್, ಶಿವಕುಮಾರ ಗುತ್ತೇದಾರ್, ನರೇಶ ಹರಸೂರಕರ್, ಆನಂದ ತಡಕಲ್, ನಂದನಕುಮಾರ ಗುತ್ತೇದಾರ್, ಇರ್ಫಾನ್ ದರ್ಜಿ, ಹಣಮಂತ ಹೊಸಮನಿ, ಹಣಮಂತ ಕಟ್ಟಿಮನಿ, ಸಿದ್ದು ಇತರರಿದ್ದರು. ಒಟ್ಟಿನಲ್ಲಿ ಒಂದೇ ಗ್ರಾಮ ಪಂಚಾಯಿತಿಯಲ್ಲಿ ಸೊಸೆ ಬಾಸ್ ಆಗಿದ್ದರೆ, ಅತ್ತೆ ಕಾರ್ಮಿಕಳಾಗಿ ದುಡಿಯುತ್ತಿದ್ದಾರೆ.