ತರೀಕೆರೆ: ಇಲ್ಲಿಯವರೆಗೆ ಯಾವುದೇ ದಾಖಲೆಯಲ್ಲಿ ಇಲ್ಲದಿದ್ದ ಅತ್ತಿಗನಾಳನ್ನು ಉಪ ಗ್ರಾಮವನ್ನಾಗಿ ಮಾರ್ಪಾಡುಗೊಳಿಸಿ 75ಕ್ಕೂ ಹೆಚ್ಚು ನಿವಾಸಿಗಳಿಗೆ ಹಕ್ಕುಪತ್ರ ಕೊಡಿಸುವುದಾಗಿ ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಅತ್ತಿಗನಾಳು ಗ್ರಾಮದಲ್ಲಿ ಭಾನುವಾರ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯ 30 ಲಕ್ಷ ರೂಪಾಯಿ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಹಿಂದಿನ ಅವಧಿಯಲ್ಲಿ ಶಾಸಕನಾಗಿದ್ದಾಗ ಗ್ರಾಮದ ಪ್ರಮುಖ ರಸ್ತೆಯನ್ನು ನಿರ್ಮಿಸಲಾಗಿತ್ತು. ಇದೀಗ ವಿವಿಧ ಬೀದಿಯ ರಸ್ತೆ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ. ಸಮಾಜದಲ್ಲಿ ಬದಲಾವಣೆಯ ಅನಿವಾರ್ಯತೆ ಇದ್ದು, ಮತದಾರರು ಜಾಗೃತರಾಗಿ ಮತದಾನದ ಅಕ್ರಮ ತಡೆಗಟ್ಟಲು ಸಹಕರಿಸಬೇಕು ಎಂದರು.
ಜಿಲ್ಲೆಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಅನುಪಾತದಲ್ಲಿ ವ್ಯತ್ಯಾಸ ಕಂಡುಬಂದಿದೆ. ಗಂಡು ಮಕ್ಕಳಿಗೆ ಹೋಲಿಸಿದರೆ ಶೇ.3ರಷ್ಟು ಹೆಣ್ಣು ಮಕ್ಕಳ ಕೊರತೆ ಇದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಅದರಲ್ಲೂ ಹಿಂದುಳಿದವರು ನೆಲೆಸಿರುವ ಕಾಲನಿ, ಗೊಲ್ಲರಹಟ್ಟಿಗಳಲ್ಲಿ ಬಾಲಗರ್ಭಿಣಿಯರ ಪ್ರಕರಣ ಹೆಚ್ಚಾಗಿದೆ. ಈ ಪಿಡುಗು ಹೋಗಲಾಡಿಸಲು ಎಲ್ಲರೂ ಶ್ರಮಿಸಬೇಕು ಎಂದರು.
ಕಾಡಂಚಿನ ಅತ್ತಿಗನಾಳು ಗ್ರಾಮದಲ್ಲಿ ಆನೆ ಹಾವಳಿ ಇದೆ. ಇದನ್ನು ನಿಯಂತ್ರಿಸಲು ಅಗತ್ಯ ಕ್ರಮಗಳಾಗಬೇಕು ಎಂದು ಗ್ರಾಮಸ್ಥರು ಮಾಡಿಕೊಂಡ ಮನವಿಗೆ ಜಿ.ಎಚ್.ಶ್ರೀನಿವಾಸ್ ಪ್ರತಿಕ್ರಿಯಿಸಿ, ಕಾಡಾನೆಗಳ ಉಪಟಳ ತಪ್ಪಿಸಲು ಅರಣ್ಯ ಇಲಾಖೆ ಮೂಲಕ ಸೂಕ್ತ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಗ್ರಾಪಂ ಮಾಜಿ ಅಧ್ಯಕ್ಷ ಪ್ರಹ್ಲಾದ, ಮಾಜಿ ಸದಸ್ಯ ಗಿರೀಶ್, ಗ್ರಾಮಸ್ಥರಾದ ಕುಬೇರಪ್ಪ, ಈಶ್ವರಪ್ಪ ಮತ್ತಿತರರಿದ್ದರು.